ಕಾಸರಗೋಡು: ಕೇರಳದಲ್ಲಿ 2025-26ನೇ ಸಾಲಿನ ಶಾಲಾ ತರಗತಿ ಸೋಮವಾರ ಆರಂಭಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶಾಲಾಪ್ರವೇಶೋತ್ಸವ ಮೂಲಕ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸ್ವಗತಿಸಲಾಯಿತು.
ಶಾಲಾ ಮಟ್ಟ, ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲಾ ಪ್ರವೇಶೋತ್ಸವ ಆಯೋಜಿಸಲಾಗಿತ್ತು. ಈ ಬಾರಿಯ ಜಿಲ್ಲಾ ಶಾಲಾ ಪ್ರವೇಶೋತ್ಸವ ಮಡಿಕೈ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಞಂಗಾಡು ಶಾಸಕ ಇ. ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲೆಯ 592 ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಪ್ರವೇಶೋತ್ಸವದ ಚಟುವಟಿಕೆಗಳನ್ನು ಸಂಪೂರ್ಣ ಹಸಿರು ಶಿಷ್ಟಾಚಾರದೊಂದಿಗೆ ನಡೆಸಲಾಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಬಿರುಸಿನ ಮಳೆ ಭಾನುವಾರದಿಂದ ಕಡಿಮೆಯಾಗಿದ್ದು, ಸೋಮವಾರ ಆಯೋಜಿಸಲಾಗಿದ್ದ ಶಾಲಾ ಪ್ರವೇಶೋತ್ಸವ ಸಂಭ್ರಮದಿಂದ ನೆರವೇರತಲು ಸಹಕಾರಿಯಾಗಿತ್ತು.
ಆಲಪ್ಪುಳ ಕೆಳವೂರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು.
(ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.)






