ನವದೆಹಲಿ: ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯಿಂದ ಸಂತ್ರಸ್ತರಾದವರನ್ನು ಸ್ಮರಿಸುವ ಜೊತೆಗೆ, ಅವರನ್ನು ಗೌರವಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ.
'ತುರ್ತು ಪರಿಸ್ಥಿತಿ ವೇಳೆ, ಸಂವಿಧಾನವು ಖಾತ್ರಿಪಡಿಸಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡವರು ಹಾಗೂ ಊಹೆಗೂ ಮೀರಿದ ಹಿಂಸೆಗೆ ಒಳಗಾದವರ ಗೌರವಾರ್ಥ ಸಭೆಯಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು' ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು.
'ಅಸಂಖ್ಯಾತ ಜನರು ಬಹಳ ಧೈರ್ಯದಿಂದಲೇ ತುರ್ತು ಪರಿಸ್ಥಿತಿಗೆ ಪ್ರತಿರೋಧ ಒಡ್ಡಿದ್ದರು. ಭಾರತದ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನಗಳು 1974ರಲ್ಲೇ ಆರಂಭವಾಗಿದ್ದವು. ಇದನ್ನು ವಿರೋದಿಸಿ ಆರಂಭಗೊಂಡಿದ್ದ ನವನಿರ್ಮಾಣ ಆಂದೋಲನ ಮತ್ತು ಸಂಪೂರ್ಣ ಕ್ರಾಂತಿ ಅಭಿಯಾನ ಹತ್ತಿಕ್ಕುವ ಪ್ರಯತ್ನಗಳು ನಡೆದವು. ಇಂತಹ ಎಲ್ಲ ದಮನಕಾರಿ ಯತ್ನಗಳನ್ನು ವಿರೋಧಿಸಿದ ಹಾಗೂ ತ್ಯಾಗ ಮಾಡಿದ ಜನರನ್ನು ಸ್ಮರಿಸಲು ಹಾಗೂ ಗೌರವಿಸಲು ಸಭೆ ನಿರ್ಣಯಿಸಿತು' ಎಂದು ವೈಷ್ಣವ್ ಹೇಳಿದ್ದಾರೆ.
'ಭಾರತೀಯರಲ್ಲಿ ಸಂವಿಧಾನ ಕುರಿತು ಅಚಲ ನಂಬಿಕೆ ಇದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಂಕಲ್ಪ ಮಾಡಿದ್ದಾರೆ ಎಂಬ ಮಾತನ್ನು ಸಭೆಯು ಮತ್ತೊಮ್ಮೆ ದೃಢೀಕರಿಸಿತು' ಎಂದು ಹೇಳಿದ್ದಾರೆ.
ಸಂಕಲ್ಪ ಮತ್ತಷ್ಟು ಗಟ್ಟಿಗೊಳಿಸಿತ್ತು: ಮೋದಿ
'ತುರ್ತು ಪರಿಸ್ಥಿತಿ ದಿನಗಳು ನನಗೆ ಸಾಕಷ್ಟು ಕಲಿಯುವ ಅವಕಾಶ ಒದಗಿಸಿದ್ದವು. ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸುವ ಕುರಿತ ನನ್ನ ಸಂಕಲ್ಪವನ್ನು ಅವು ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿದವು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ದಿನಗಳ ಕುರಿತ 'ದಿ ಎಮರ್ಜೆನ್ಸಿ ಡೈರೀಸ್- ಇಯರ್ಸ್ ದಟ್ ಫೋರ್ಜ್ಡ್ ಎ ಲೀಡರ್' ಕೃತಿಯ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಮೋದಿ ಅವರು ನಡೆಸಿದ ಹೋರಾಟಗಳನ್ನು ಕಟ್ಟಿಕೊಡುವ ಈ ಕೃತಿಯನ್ನು ಬ್ಲೂಕ್ರಾಫ್ಟ್ ಪ್ರಕಟಿಸಿದೆ. ತುರ್ತು ಪರಿಸ್ಥಿತಿ ಅವಧಿಯಲ್ಲಿ ತಾವು ಆರ್‌ಎಸ್‌ಎಸ್ ಪ್ರಚಾಕರರಾಗಿದ್ದನ್ನು ಕೂಡ ಅವರು ಈ ಕೃತಿಯಲ್ಲಿ ಸ್ಮರಿಸಿದ್ದಾರೆ.
'ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೋಡಿದವರು ಅಥವಾ ಅಂದು ನೋವು ಅನುಭವಿಸಿರುವ ಕುಟುಂಬಗಳ ಸದಸ್ಯರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತೆ ನಾನು ಕೋರುತ್ತೇನೆ. 1975ರಿಂದ 1977ರ ವರೆಗಿನ ಭಯಾನಕ ದಿನಗಳ ಕುರಿತು ಯುವಜನತೆಯಲ್ಲಿ ಇದರಿಂದ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ' ಎಂದು ಮೋದಿ ಪ್ರತಿಪಾದಿಸಿದ್ದಾರೆ.
'ತುರ್ತು ಪರಿಸ್ಥಿತಿ ದಿನಗಳ ಅನುಭವಗಳನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಒಟ್ಟುಗೂಡಿಸಿ ಪ್ರಕಟಿಸಿರುವುದಕ್ಕೆ ಸಂತಸವಾಗುತ್ತಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಆಗ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು' ಎಂದೂ ಮೋದಿ ಹೇಳಿದ್ದಾರೆ.
ಬಂಧನ ಆದೇಶಗಳು..
ಅಪರೂಪದ ದಾಖಲೆಗಳ ಪ್ರದರ್ಶನ ತುರ್ತು ಪರಿಸ್ಥಿತಿ ಜಾರಿಯಾಗಿದ್ದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಲರಾಜ್ ಮಧೋಕ್ ಮತ್ತಿತರ ಪ್ರಮುಖ ನಾಯಕರ ಬಂಧನಕ್ಕೆ ಹೊರಡಿಸಲಾಗಿದ್ದ ಆದೇಶಗಳ ಪ್ರತಿಗಳು ಸೇರಿದಂತೆ ಅನೇಕ ಅಪ್ರಕಟಿತ ದಾಖಲೆಗಳನ್ನು ದೆಹಲಿ ಸರ್ಕಾರ ಬುಧವಾರ ಪ್ರದರ್ಶನಕ್ಕಿಟಿತ್ತು. ಆಗಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ ಪ್ರಯುಕ್ತ ದೆಹಲಿ ಸರ್ಕಾರ ಅಪರೂಪದ ದಾಖಲೆಗಳು ಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಈ ವೇಳೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ'ತುರ್ತು ಪರಿಸ್ಥಿ ಹೇರುವ ಮೂಲಕ ಸಂವಿಧಾನದ ಹತ್ಯೆ ಮಾಡಿದವರೇ ಈಗ ಅದರ ಸಂರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 'ಸಂವಿಧಾನವನ್ನು ಕೊಲೆ ಮಾಡಿದ ಇಂತಹ ಕರಾಳ ದಿನವೊಂದು ದೇಶದ ಇತಿಹಾಸದಲ್ಲಿ ಬೇರೆ ಇರಲಿಕ್ಕಿಲ್ಲ. ಈಗ ಅವರು (ರಾಹುಲ್ ಗಾಂಧಿ) ತಮ್ಮ ಜೇಬಿನಲ್ಲಿ ಸಂವಿಧಾನದ ಪ್ರತಿಯನ್ನು ಇಟ್ಟುಕೊಂಡು ಪ್ರಜಾಪ್ರಭುತ್ವ ರಕ್ಷಣೆಗೆ ಕರೆ ಕೊಡುತ್ತಿದ್ದಾರೆ' ಎಂದು ಕುಟುಕಿದರು. ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್ ದೆಹಲಿಯ ಕಲೆ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಹಾಗೂ ಇತರರು ಇದ್ದರು.
ಅಮಿತ್ ಶಾ, ಕೇಂದ್ರ ಗೃಹ ಸಚಿವತುರ್ತು ಪರಿಸ್ಥಿತಿ ಹೇರಿಕೆಯು ರಾಷ್ಟ್ರೀಯ ಅಗತ್ಯವೇನೂ ಆಗಿರಲಿಲ್ಲ. ಅದು ಕಾಂಗ್ರೆಸ್ ಪಕ್ಷ ಹಾಗೂ ಏಕೈಕ ವ್ಯಕ್ತಿಯ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯ ಪ್ರತಿಫಲನವಾಗಿತ್ತು. ಅಧಿಕಾರದಲ್ಲಿರುವವರು ಸರ್ವಾಧಿಕಾರಿಗಳಾದಲ್ಲಿ ಅವರನ್ನು ಜನರೇ ಕೆಳಗಿಳಿಸುತ್ತಾರೆ ಎಂಬುದನ್ನು ತುರ್ತು ಪರಿಸ್ಥಿತಿ ಪ್ರತಿಯೊಬ್ಬರನ್ನೂ ಜ್ಞಾಪಿಸುತ್ತದೆ. ಇದೇ ಕಾರಣಕ್ಕೆ ಮೋದಿ ನೇತೃತ್ವದ ಸರ್ಕಾರವು ಈ ದಿನವನ್ನು 'ಸಂವಿಧಾನ ಹತ್ಯಾ ದಿವಸ'ವನ್ನಾಗಿ ಹಮ್ಮಿಕೊಳ್ಳುತ್ತಿದೆ. ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ50 ವರ್ಷಗಳ ಹಿಂದೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ ಈಗಲೂ ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದೆ. ಒಂದು ಕುಟುಂಬ ಮಾತ್ರ ದೇಶದ ಆಡಳಿತ ನಡೆಸುವ ಹಕ್ಕು ಹೊಂದಿದೆ ಎಂಬುದು ಕಾಂಗ್ರೆಸ್‌ನ ನಂಬಿಕೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಬಿಜೆಪಿಯು 'ಸಂವಿಧಾನ ಹತ್ಯಾ ದಿವಸ' ಎಂಬ ನಾಟಕವಾಡುತ್ತಿದೆ. ಕೇಂದ್ರ ಸರ್ಕಾರ ಸಹಿಷ್ಣುತೆ ಭ್ರಾತೃತ್ವ ಅಭಿವೃದ್ಧಿ ಹೊಂದುವ ಸ್ವಾತಂತ್ರ್ಯವನ್ನು ಅಳಿಸಿ ಹಾಕಿದ್ದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ'ಸಂಘ ಪರಿವಾರ ನೇತೃತ್ವದ ಸರ್ಕಾರ'ವು ಸಂವಿಧಾನವನ್ನು ನಾಶಪಡಿಸಲು ಯತ್ನಿಸುತ್ತಿದ್ದು ದೇಶದಲ್ಲಿ ಸದ್ಯ ಅಘೋಷಿತ ತುರ್ತು ಪರಿಸ್ಥಿತಿ ಮನೆ ಮಾಡಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವದಲ್ಲಿನ ಕರಾಳ ಅಧ್ಯಾಯ.ಬೃಂದಾ ಕಾರಟ್, ಸಿಪಿಎಂ ನಾಯಕಿದುಡಿಯುವ ವರ್ಗಗಳು ಹೋರಾಟದ ಮೂಲಕ ಪಡೆದಿದ್ದ ಪ್ರತಿಭಟಿಸುವ ಹಕ್ಕನ್ನು ತುರ್ತು ಪರಿಸ್ಥಿತಿ ಕಸಿದುಕೊಂಡಿತ್ತು. ಸಂಘಟಿತರಾಗುವ ಮುಷ್ಕರ ಹೂಡುವಂತಹ ಮೂಲಭೂತ ಹಕ್ಕನ್ನು ಕೂಡ ತುರ್ತು ಪರಿಸ್ಥಿತಿ ತೊಡೆದುಹಾಕಿತ್ತು. ಸಂಜಯ ರಾವುತ್, ಶಿವಸೇನಾ(ಯುಬಿಟಿ) ರಾಜ್ಯಸಭಾ ಸದಸ್ಯಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದಲ್ಲಿರುವ ಅವಕಾಶಗಳಡಿಯೇ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ನಂತರ ಸೂಕ್ತ ಸಮಯದಲ್ಲಿ ಹಿಂಪಡೆದಿದ್ದರು. ಇದು ಲೋಕಸಭೆಗೆ ಹೊಸದಾಗಿ ಚುನಾವಣೆಗಳನ್ನು ನಡೆಸಲು ದಾರಿ ಮಾಡಿಕೊಟ್ಟಿತ್ತು.

