ನವದೆಹಲಿ: ಸಂಸತ್ ಅಥವಾ ರಾಜ್ಯ ವಿಧಾನಸಭೆ ಯಾವುದೇ ಕಾನೂನು ರಚಿಸಿದ ಸಂದರ್ಭದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ನಂದಿನಿ ಸುಂದರ್ ಹಾಗೂ ಇತರರು 2012ರಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶಚಂದ್ರ ಶರ್ಮಾ ಅವರು ಇದ್ದ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.
ನಕ್ಸಲರ ವಿರುದ್ಧದ ಹೋರಾಟಕ್ಕೆ ಬಲತುಂಬುವ ಉದ್ದೇಶದಿಂದ ಛತ್ತೀಸಗಢ ಸರ್ಕಾರವು 2011ರಲ್ಲಿ ಛತ್ರೀಸಗಢ ಮೀಸಲು ಸಶಸ್ತ್ರ ಪೊಲೀಸ್ ಪಡೆ ಕಾಯ್ದೆ ರೂಪಿಸಿತ್ತು. ಸರ್ಕಾರದ ಈ ನಡೆ ನ್ಯಾಯಾಂಗ ನಿಂದನೆ ಎಂದು ಆರೋಪಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.




