HEALTH TIPS

ಅಯೋಧ್ಯೆ: 2ನೇ ಪ್ರಾಣ ಪ್ರತಿಷ್ಠಾಪನೆಗೆ ಚಾಲನೆ

ಲಖನೌ: ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದಲ್ಲಿರುವ ಎಂಟು ದೇವಾಲಯಗಳಲ್ಲಿನ ಎರಡನೇ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಗಣೇಶ ಪೂಜೆ ನೆರವೇರಿಸುವುದರೊಂದಿಗೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಧಾರ್ಮಿಕ ವಿಧಿಗಳು ಮೂರು ದಿನ ನೆರವೇರಲಿದ್ದು, ಪೂಜೆ, ಭೋಗ ಮತ್ತು ಆರತಿಯೊಂದಿಗೆ ಪ್ರಾಣ ಪ್ರತಿಷ್ಠಾಪನೆ ಗುರುವಾರ ಮುಕ್ತಾಯವಾಗಲಿದೆ.

ರಾಮ ಮಂದಿರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ.

ಸರಯೂ ನದಿಯ ಪವಿತ್ರ ಜಲ ತುಂಬಿದ ಕಲಶಗಳ ಮೆರವಣಿಗೆಗೆ ನದಿಯ ಪೂರ್ವ ತೀರದಲ್ಲಿ ಸೋಮವಾರ ಚಾಲನೆ ನೀಡಲಾಗಿತ್ತು. ಕಲಶಗಳ ಮೆರವಣಿಗೆ ಯಜ್ಞಶಾಲೆ ತಲುಪಿದ್ದು, ಈ ಪವಿತ್ರ ಜಲವನ್ನು ಮೂರು ದಿನಗಳ ಕಾಲ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪದಾಧಿಕಾರಿಗಳು ಹೇಳಿದ್ದಾರೆ.

ಆಗ ಬಾಲ ರಾಮ-ಈಗ ರಾಜನ ರೂಪ: ಕಳೆದ ವರ್ಷ ಜನವರಿ 22ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು. ಈಗ ನಡೆಯುವ ಕಾರ್ಯಕ್ರಮದಲ್ಲಿ ರಾಜನಾಗಿ ಪಟ್ಟವೇರಿದ ರಾಮ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ ಎಂದು ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದ ಮೊದಲ ಮಹಡಿಯಲ್ಲಿ ರಾಮ ದೇವರ ರಾಜಾಂಗಣ ಇರಲಿದೆ. ಇಲ್ಲಿ, ರಾಮ ದೇವರ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರಘ್ನ ಹಾಗೂ ಹನುಮಂತ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ 108 ವೇದ ವಿದ್ವಾಂಸರು ಧಾರ್ಮಿಕ ವಿಧಿಗಳನ್ನು ನಡೆಸಿಕೊಡಲಿದ್ದು, ವಾರಾಣಸಿಯ ಪಂಡಿತ ಜೈಪ್ರಕಾಶ ನೇತೃತ್ವ ವಹಿಸುವರು.

'ದೇಶದ ವಿವಿಧ ಭಾಗಗಳ ಲಕ್ಷಾಂತರ ಭಕ್ತರು ಈ ಮೂರು ದಿನ ನಡೆಯುವ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ' ಎಂದು ಟ್ರಸ್ಟ್‌ ಪದಾಧಿಕಾರಿಗಳು ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಕಾರಣ ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಭಯೋತ್ಪಾದಕ ನಿಗ್ರಹ ದಳದ ಕಮಾಂಡೊಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಮೂರು ದಿನ ಮೊದಲ ಮಹಡಿ ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದೂ ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries