ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ 2025-26 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಹಾಗೂ ನೂತನ ಟೈಲ್ಸ್ ಹಾಕಿದ ತರಗತಿ ಕೊಠಡಿ ಮತ್ತು ಪ್ರಯೋಗಾಲಯ ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ಸೋಮವಾರ ಜರಗಿತು. ಉದ್ಯಮಿ, ಶಾಲಾ ಹಳೆ ವಿದ್ಯಾರ್ಥಿ ಕಿಶೋರ್ ರೈ ಅವರು ಮಾತೃಶ್ರೀ ಯವರ ಸ್ಮರಣಾರ್ಥ ನೀಡಿದ ನೂತನ ಟೈಲ್ಸ್ ಹಾಕಿದ ತರಗತಿ ಕೊಠಡಿ ಹಾಗೂ ಪ್ರಯೋಗಾಲಯಗಳ ಉದ್ಘಾಟನೆಯನ್ನು ಅವರ ಪಿತೃಶ್ರೀಗಳಾದ ಬೊಡ್ಡಂಗೋಡಿ ಸದಾಶಿವ ರೈ ನೆರವೇರಿಸಿದರು. ಬಳಿಕ ಶಾಲೆಗೆ ನೂತನವಾಗಿ ಪ್ರವೇಶಾತಿ ಪಡೆದ ಮಕ್ಕಳನ್ನು ಬಾಡ್ಜ್ ನೀಡಿ ಮೆರವಣಿಗೆಯ ಮೂಲಕ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಶಾಲೆಗೆ ಆದರದಿಂದ ಸ್ವಾಗತಿಸಿದರು.
ಮೆರವಣಿಗೆ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ ರುಕಿಯಾ ಸಿದ್ದಿಕ್ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಬೊಡ್ಡಂಗೋಡಿ ಸದಾಶಿವ ರೈ ಮತ್ತು ಗುರುನಂದನ್ ಅವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಉಪ್ಪಳದ ಟಾಟಾ ಮೋಟಾರ್ಸ್ ಪ್ರಿ ಪ್ರೈಮರಿ ಮಕ್ಕಳಿಗೆ ನೀಡಿದ ಉಚಿತ ಕಿಟ್ ಗಳನ್ನು ಮಕ್ಕಳಿಗೆ ನೀಡಲಾಯಿತು. ಕನ್ನಡ ಮಾಧ್ಯಮದಲ್ಲಿ ಪ್ರವೇಶಾತಿ ಪಡೆದ ಮಕ್ಕಳಿಗೆ ಅಧ್ಯಾಪಕ ವೃಂದ ನೀಡುವ ಉಚಿತ ಬ್ಯಾಗ್ ವಿತರಣೆ ಈ ಸಂದರ್ಭದಲ್ಲಿ ನಡೆಯಿತು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಯಂ. ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ 2024-25ನೇ ಸಾಲಿನ ಎಲ್.ಎಸ್.ಎಸ್.- ಯು ಎಸ್.ಎಸ್. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ಮಕ್ಕಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಕೆ.ಯಂ. ವಂದಿಸಿದರು. ಎಲ್ ಪಿ. ಯಸ್ ಆರ್ ಜಿ ಸಂಚಾಲಕ ಸುನಿಲ್ ಕುಮಾರ್ ಎಂ.ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ಸಿಂಚನ ಮನೋರಂಜನಾ ಕಾರ್ಯಕ್ರಮ ಜರಗಿತು.




.jpg)

