ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ, ಕಚೇರಿಯೊಳಗೆ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಅವರ ಪತಿ, ಕೆ.ವಿ ಯೂಸುಫ್ ಹಾಗೂ ರಫೀಕ್ ಎಂಬವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಕಟ್ಟಡ ಕಾನೂನು ಉಲ್ಲಂಘಿಸಿ ನಿರ್ಮಿಸಿರುವುದನ್ನು ಪತ್ತೆಹಚ್ಚಲಾಗಿತ್ತು. ಆದರೆ ಈ ಕಾಮಗಾರಿಯ ಮೊತ್ತ ತಕ್ಷಣ ಬಿಡುಗಡೆಮಾಡುವಂತೆ ಆಗ್ರಹಿಸಿ ಗುತ್ತಿಗೆದಾರ ಯೂಸುಫ್ ಹಾಗೂ ಗುತ್ತಿಗೆ ಪಾಲುದಾರ ರಫೀಕ್ ಎಂಬವರು ಕಾರ್ಯದರ್ಶಿ ಕೊಠಡಿಗೆ ಅನಿಧಿಕೃತವಾಗಿ ನುಗ್ಗಿ ದಾಂಧಲೆ ನಡೆಸಿರುವುದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಸೀನಿಯರ್ ಸೆಕ್ರೆಟರಿ ಸುಮೇಶ್ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪೇಟೆಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಕಾಮಗಾರಿ ನಿರ್ಮಾಣದ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳೂ ರಂಗಕ್ಕಿಳಿದಿದೆ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ಸ್ಥಳೀಯಾಡಳಿತ ಇಲಾಖೆಗೆ ದೂರನ್ನೂ ಸಲ್ಲಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿಜಿಲೆನ್ಸ್‍ಗೂ ದೂರು ನೀಡಲಾಗಿದೆ.
ಪ್ರಯಾಣಿಕರ ತಂಗುದಾಣ ಕಟ್ಟಡ ಕಾಮಗಾರಿಯ ಮೊತ್ತ ತಕ್ಷಣ ಬಿಡುಗಡೆಮಾಡುವಂತೆ ಕೆ.ವಿ ಯೂಸುಫ್, ಕಾರ್ಯದರ್ಶಿ ಮೇಲೆ ಒತ್ತಡಹೇರಿದ್ದು, ಕಳಪೆ ಹಾಗೂ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸಿರುವ ಬಗ್ಗೆ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ಬಿಲ್ ಮಂಜೂರುಮಾಡಲು ಕಾರ್ಯದರ್ಶಿ ತಯಾರಾಗದ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿ ದಾಂಧಲೆ ನಡೆಸಿದ್ದಾರೆನ್ನಲಾಗಿದೆ.




