ಮುಳ್ಳೇರಿಯ: ಅಡೂರು ಸನಿಹದ ಉರುಡೂರು ಚಂದನಕ್ಕಡ್ ನಿವಾಸಿ, ದೈವನರ್ತನ ಕಲಾವಿದ ಸತೀಶ್ ಟಿ ಯಾನೆ ಬಿಜು(46)ಎಂಬವರ ಸಾವು ಕೊಲೆ ಕೃತ್ಯವೆಂದು ಶವಮಹಜರು ವರದಿಯಲ್ಲಿ ಸಾಬೀತಾಗಿದೆ. ಕತ್ತಿನ ಭಾಗದ ಎಲುಬು ಮುರಿತ ಸಾವಿಗೆ ಕಾರಣವೆನ್ನಲಾಗಿದೆ. ಮೃತದಹದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸತೀಶನ್ ಅವರ ಸ್ನೇಹಿತ ಚಂದನಕ್ಕಾಡ್ ನಿವಾಸಿ ಚಿದಾನಂದ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಅವರನ್ನು ಅಸೌಖ್ಯಗೊಂಡ ಸ್ಥಿತಿಯಲ್ಲಿ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ್ ಎಂಬವರ ಮನೆ ವರಾಂಡದಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
ಸತೀಶನ್ ಹಾಗೂ ಚಿದಾನಂದ ಇಬ್ಬರೂ ಸೋಮವಾರ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ್ ಎಂಬವರ ಮನೆ ವರಾಂಡದಲ್ಲಿಕುಳಿತು ಮದ್ಯ ಸೇವಿಸಿದ್ದಾರೆ. ಮದ್ಯದ ನಶೆಯಲ್ಲಿ ಇವರ ಮಧ್ಯೆ ವಾಗ್ವಾದ ಉಂಟಾಗಿ ಸತೀಶನ್ ಅವರನ್ನು ಚಿದನಂದ ದೂಡಿಹಾಕಿದ ಪರಿಣಾಮ ಕತ್ತಿನ ಭಾಗಕ್ಕೆ ಗಾಯವುಂಟಾಗಿದೆ. ಇದಕ್ಕೆ ಔಷಧೋಪಚಾರ ಮಾಡಿದ ನಂತರ ಅಲ್ಲೇ ಮನೆ ಜಗಿಯಲ್ಲಿ ಮಲಗಿಸಿ ತೆರಳಿದ್ದರೆನ್ನಲಾಗಿದೆ.
ಸತೀಶ್ ಹಾಗೂ ಇವರ ಸಹೋದರಿ ಸೌಮಿನಿ ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದು, ಸಹೋದರಿ ಕೆಲಸದಿಂದ ಸಂಜೆ ಮನೆಗೆ ಆಗಮಿಸಿದಾಗ ಸತೀಶ್ ಮನೆಯಲ್ಲಿರಲಿಲ್ಲ. ಹುಡುಕಾಡುವ ಮಧ್ಯೆ ನೆರೆಮನೆಯ ಚಾವಡಿಯಲ್ಲಿ ಅಸೌಖ್ಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸುಪಾಸಿನವರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿದಾನಂದನ ವಿದರುದ್ಧ ಮನಪೂರ್ವಕವಲ್ಲದ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ.




