HEALTH TIPS

ಭಾರತೀಯ ಭಾಷೆಗಳಿಗೆ ಹಿಂದಿ ಶತ್ರುವಲ್ಲ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ನವದೆಹಲಿ: 'ಹಿಂದಿ ಭಾಷೆಯು ಯಾವುದೇ ಇತರೆ ಭಾರತೀಯ ಭಾಷೆಗೆ ಶತ್ರುವಾಗಲು ಸಾಧ್ಯವಿಲ್ಲ. ಬದಲಿಗೆ ಅದು ಎಲ್ಲ ಭಾರತೀಯ ಭಾಷೆಗಳಿಗೂ ಮಿತ್ರವಾಗಿರುವ ಭಾಷೆ ಎಂದು ನಾನು ನಂಬಿದ್ದೇನೆ. ಜೊತೆಗೆ, ಯಾವುದೇ ವಿದೇಶಿ ಭಾಷೆಗೆ ವಿರೋಧವಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಗೃಹ ಇಲಾಖೆ ಅಡಿಯಲ್ಲಿ ಬರುವ 'ಅಧಿಕೃತ ಭಾಷಾ ವಿಭಾಗ'ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಯಾವುದೇ ಭಾಷೆಗೂ ವಿರೋಧವಿರಬಾರದು. ಯಾವುದೇ ವಿದೇಶಿ ಭಾಷೆಗೂ ವಿರೋಧ ಬೇಡ. ಆದರೆ, ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. ನಮ್ಮ ಭಾಷೆಯನ್ನೇ ಮಾತನಾಡುವ ಮತ್ತು ನಮ್ಮ ಭಾಷೆಯಲ್ಲಿಯೇ ಚಿಂತನೆ ನಡೆಸುಬೇಕು ಎನ್ನುವ ಒತ್ತಾಯ ಮಾಡಬೇಕು' ಎಂದರು.‌

'ಇಂಗ್ಲಿಷ್‌ ಮಾತನಾಡುವವರು ನಾಚಿಕೆಪಡುವ ಕಾಲ ಶೀಘ್ರದಲ್ಲಿಯೇ ಬರಲಿದೆ' ಎಂದು ಇತ್ತೀಚೆಗೆ ಅಮಿತ್‌ ಶಾ ಹೇಳಿದ್ದರು. ಇದು ವಿವಾದವನ್ನು ಸೃಷ್ಟಿಸಿತ್ತು.

'ಕೆಲವು ದಶಕಗಳ ಹಿಂದೆ, ಭಾರತವನ್ನು ವಿಭಜಿಸುವುದಕ್ಕೆ ಭಾಷೆಯನ್ನು ಬಳಸಿಕೊಳ್ಳಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಆದರೆ, ಪ್ರಯತ್ನವನ್ನಂತೂ ಮಾಡಿದರು. ಭಾರತವನ್ನು ಒಗ್ಗೂಡಿಸಲು ನಮ್ಮ ಭಾಷೆಯನ್ನು ಪ್ರಭಾವಶಾಲಿ ಮಾಧ್ಯಮವನ್ನಾಗಿ ನಾವು ಮಾಡುತ್ತೇವೆ' ಎಂದರು.

'ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಭಾರತೀಯ ಭಾಷೆಯಲ್ಲಿಯೇ ಆಡಳಿತಾತ್ಮಕ ವ್ಯವಹಾರ ನಡೆಸಬೇಕು. ಈ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡುತ್ತೇವೆ. ಅವರಿಗೆ ಈ ಕುರಿತು ಅಗತ್ಯ ಸಹಕಾರ ನೀಡುತ್ತೇವೆ. ಭಾರತೀಯ ಭಾಷೆಯಲ್ಲಿಯೇ ವ್ಯವಹರಿಸುವಂತೆ ಮನವೊಲಿಸುತ್ತೇವೆ, ಒತ್ತಡ ಹೇರುತ್ತೇವೆ' ಎಂದರು.

ಭಾಷಾ ತುರ್ತು ಪರಿಸ್ಥಿತಿ ಹೇರಲು ಬಿಜೆಪಿ ಯತ್ನ: ಉದ್ಧವ್‌

ಮುಂಬೈ (ಪಿಟಿಐ): ಬಿಜೆಪಿ ನೇತೃತ್ವದ ಸರ್ಕಾರವು ಮಹಾರಾಷ್ಟ್ರದಲ್ಲಿ 'ಭಾಷಾ ತುರ್ತು ಪರಿಸ್ಥಿತಿ' ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆಗೆ ಆಸ್ಪದ ನೀಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಗುರುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿರುವ ಅವರು ' ನಾವು ಯಾವುದೇ ಭಾಷೆಗಳ ವಿರೋಧಿಗಳಲ್ಲ. ಆದರೆ ಯಾವುದೇ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ. ನಾವು ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಮತ್ತು ವಿರೋಧ ಮುಂದುವರಿಯಲಿದೆ' ಎಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ಮಾಡಬೇಕು ಎಂಬುದು ಬಿಜೆಪಿಯ ರಹಸ್ಯ ಕಾರ್ಯಸೂಚಿಯಾಗಿದ್ದು ಭಾಷೆಯ ಆಧಾರದಲ್ಲಿ ಜನರನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ಉದ್ಧವ್‌ ದೂರಿದ್ದಾರೆ.

ಹಿಂದಿ ಕಡೆಗಣಿಸಲಾಗದು: ಶರದ್‌ ಪವಾರ್‌

1ನೇ ತರಗತಿಯಿಂದಲೇ ಹಿಂದಿ ಕಲಿಯಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ. ಹಿಂದಿಯನ್ನು ಪರಿಚಯಿಸಲೇ ಬೇಕು ಎನ್ನುವುದಿದ್ದರೆ 5ನೇ ತರಗತಿಯ ನಂತರ ಪರಿಚಯಿಸಲಿ. ಮಹಾರಾಷ್ಟ್ರದಲ್ಲಿ ಬಹುತೇಕ ಮಂದಿ ಹಿಂದಿ ಮಾತನಾಡುತ್ತಾರೆ. ಹೀಗಾಗಿ ಹಿಂದಿ ಕಡೆಗಣಿಸಲು ಯಾವುದೇ ಕಾರಣಗಳೂ ಇಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries