ಕಾಸರಗೋಡು: ಜಿಲ್ಲೆಯ ತೋಟಗಾರಿಕಾ ನಿಗಮ(ಪಿ.ಸಿ.ಕೆ)ದ ವಿವಿಧ ಎಸ್ಟೇಟ್‍ಗಳಲ್ಲಿ ದಾಸ್ತಾನಿರಿಸಿರುವ ಮಾರಕ ಕೀಟನಾಶಕ ಎಂಡೋಸಲ್ಫಾನ್ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಕೊನೆಗೂ ಇಲಾಖೆ ಮುಂದಾಗಿದೆ. ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ನೇತೃತ್ವದ ತಜ್ಞರ ತಂಡ ಈಗಾಗಲೇ ಜಿಲ್ಲೆಗೆ ಆಗಮಿಸಿ ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕಾಸರಗೋಡು ಜಿಲ್ಲೆಯ ತೋಟಗಾರಿಕಾ ಪ್ರದೇಶದ ಜನತೆಯ ನಿದ್ದೆಗೆಡಿಸಲು ಕಾರಣವಾಗಿರುವ ಎಂಡೋಸಲ್ಫಾನ್, ಕೆಲವು ತೋಟಗಾರಿಕಾ ಎಸ್ಟೇಟ್‍ಗಳಲ್ಲಿ ಇನ್ನೂ ದಾಸ್ತಾನಿದ್ದು, ಇವುಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಸಂಷ್ಕರಿಸಿದಲ್ಲಿ ಇದು ಜೀವ ಸಂಕುಲಗಳಿಗೆ ಭಾರೀ ವಿಪತ್ತು ತಂದೊಡ್ಡಲಿರುವ ಕಾರಣದಿಂದ ಕಳೆದ ಹಲವು ವರ್ಷಗಳಿಂದಲೂ ಗೋದಾಮಿನಲ್ಲಿ ಸಂರಕ್ಷಿಸಿಟ್ಟುಕೊಂಡು ಬರಲಾಗಿದೆ.
ತೋಟಗಾರಿಕಾ ನಿಗಮದ ಪೆರಿಯ ಎಸ್ಟೇಟ್‍ನಲ್ಲಿ ಕೇಂದ್ರ ಮಲಿನೀಕರಣ ನಿಯಂತ್ರಣ ಮಂಡಳಿ ಪ್ರಾದೇಶಿಕ ನಿರ್ದೇಶಕ ಚಂದ್ರಬಾಬು ಅವರ ನೇತೃತ್ವದಲ್ಲಿ ಎಂಡೋಸಲ್ಫಾನನ್ನು ಹೊಸ ಬ್ಯಾರಲ್‍ಗೆ ವರ್ಗಾಯಿಸುವ ಕೆಲಸಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ಹಾಗೂ ಮಾನದಂಡ ಪ್ರಕಾರ ನಿಷ್ಕ್ರಿಯಗೊಳಿಸುವ ಕಾರ್ಯಾ ಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ಪೆರಿಯ ಅಲ್ಲದೆ ರಾಜಾಪುರಂ ಎಸ್ಟೇಟ್‍ನಲ್ಲೂ ಎಂಡೋಸಲ್ಫಾನ್ ದಾಸ್ತಾನಿದೆ. ಜಿಲ್ಲೆಯಲಲಿ ಒಟ್ಟು 1015ಲೀ. ಎಂಡೋಸಲ್ಫಾನ್ ದಾಸ್ತಾನಿದ್ದು, ಇದರಲ್ಲಿ 700ಲೀ. ಪೆರಿಯ ಎಸ್ಟೇಟ್‍ನಲ್ಲಿದೆ. ಇಲ್ಲಿನ ಎಂಡೋಸಲ್ಫಾನ್ ದ್ರಾವಣವನ್ನು ವಿಶೇಷವಾಗಿ ತಯಾರಿಸಲಾಗಿರುವ ಬ್ಯಾರೆಲ್‍ಗಳಿಗೆ ವರ್ಗಾಯಿಸಲಾಗಿದೆ. ಇನ್ನು ರಾಜಾಪುರಂ ಎಸ್ಟೇಟ್‍ನಲ್ಲಿ ದಾಸ್ತಾನಿರುವ ಎಂಡೋಸಲ್ಫಾನನ್ನು ಒಂದು ವಾರದೊಳಗೆ ವಿಶೇಷ ಬ್ಯಾರಲ್‍ಗೆ ತುಂಬಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್‍ನಲ್ಲಿ ಎಂಡೋಸಲ್ಫಾನ್ ಸ್ಥಳಾಂತರ ಕಾರ್ಯ ನಡೆಸಲಾಯಿತು. ಸಿಪಿಸಿಬಿ ವಿಜ್ಞಾನಿ ಡಾ. ದೀಪೇಶ್, ಹಿಂದೂಸ್ಥಾನ್ ಇನ್‍ಸೆಕ್ಟಿಸೈಡ್ ಲಿಮಿಟೆಡ್(ಎಚ್‍ಐಎಲ್)ಪ್ರತಿನಿಧಿ ಪ್ರವೀಣ್, ಪಿ.ಸಿಕೆ ಮಲಬಾರ್ ಗ್ರೂಪ್ ಪ್ರಬಂಧಕ ಸಜೀವ್, ಹೊಸದುರ್ಗ ತಹಸೀಲ್ದಾರ್ ಜಯಪ್ರಕಾಶ್, ಸಹಾಯಕ ಪ್ರಬಂಧಕ ಅತುಲ್, ಸಹಾಯಕ ಇಂಜಿನಿಯರ್ ವಿಮಲ್ ಸುಂದರ್, ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪಿಸಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ತೋಟಗಾರಿಕಾ ನಿಗಮದ ಮಿಂಚಿಪದವು ಗೇರುತೋಟದ ಬಾವಿಯೊಂದರಲ್ಲಿ ಅವೈಜ್ಞಾನಿಕವಾಗಿ ಎಂಡೋಸಲ್ಫಾನ್ ಹೂತುಹಾಕಿರುವ ಬಗ್ಗೆ ಹಸಿರು ನ್ಯಾಯಾಧಿಕರಣ ಪೀಠದಲ್ಲಿ ವ್ಯಾಜ್ಯ ಮುಂದುವರಿದಿದೆ. ವಿವಿಧ ಗೋದಾಮುಗಳಲ್ಲಿ ದಾಸ್ತಾನಿÂರುವ ಎಂಡಸೋಸಲ್ಫಾನನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಕೇಂದ್ರ ಮಾಲಿನ್ಯ ನಿಯಂತ್ರಂ ಮಂಡಳಿಗೆ ಹಸಿರು ನ್ಯಾಯಾಧಿಕರಣ ಪೀಠ ಹೊಣೆಗಾರಿಕೆ ವಹಿಸಿಕೊಟ್ಟಿತ್ತು.




