ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥದ ಚೆರ್ಕಳದಿಂದ ತಲಪ್ಪಾಡಿ ವರೆಗಿನ ಮೊದಲ ರೀಚ್‍ನ ಕಾಮಗಾರಿ ಬಹುತೇಕ ಪೂರ್ತಿಗೊಂಡಿದ್ದು, ರಸ್ತೆ ಅಂಚಿಗೆ ಸೈನ್‍ಬೋರ್ಡ್ ಅಳವಡಿಸುವ ಕಾರ್ಯದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ.
ಗಡಿ ಪ್ರದೇಶ ತಲಪ್ಪಾಡಿಯಿಂದ ಹೆದ್ದಾರಿ ಬದಿ ಬೋರ್ಡ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಬೋರ್ಡಿನಲ್ಲಿರುವ ಬರವಣಿಗೆ ಮಲಯಾಳದೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿದ್ದರೆ, ಕನ್ನಡಕ್ಕೆ ಇಲ್ಲಿ ಸ್ಥಾನವಿಲ್ಲದಾಗಿದೆ. ಕರ್ನಾಟಕದಿಂದ ಗಡಿನಾಡು ಕಾಸರಗೋಡಿನ ಅಚ್ಚಕನ್ನಡ ಮಣ್ಣು ಮಂಜೇಶ್ವರಕ್ಕೆ ಎಂಟ್ರಿ ಪಡೆದುಕೊಳ್ಳುತ್ತಿದ್ದಂತೆ ಇಲ್ಲಿ ಕನ್ನಡವನ್ನು ಉಪೇಕ್ಷಿಸಲಾಗಿದೆ. ಕಾಸರಗೋಡು ಮಂಜೇಶ್ವರದಲ್ಲಿ ಶೇ. 90ರಷ್ಟು ಕನ್ನಡಿಗರಿದ್ದರೂ, ಇಲ್ಲಿನ ಸೈನ್‍ಬೋರ್ಡ್‍ನಲ್ಲಿ ಕನ್ನಡ ಭಾಷೆಯನ್ನು ಹೊರತುಪಡಿಸಿರುವ ಬಗ್ಗೆ ಕನ್ನಡಿಗರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಸೂಚನಾಫಲಕಗಳಲ್ಲಿ ಕನ್ನಡವನ್ನು ಒಳಪಡಿಸಲಾಗಿದ್ದರೂ, ಇವೆಲ್ಲವನ್ನೂ ಷಟ್ಪಥ ಕಾಮಗಾರಿ ಸಂದರ್ಭ ತೆರವುಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ನೂತನ ಸೂಚನಾಫಲಕಗಳಲ್ಲಿ ಕನ್ನಡವನ್ನು ಮೂಲೆಗುಂಪುಮಾಡುವ ಮೂಲಕ ಗಡಿನಾಡ ಕನ್ನಡಿಗರಲ್ಲಿ ತಾರತಮ್ಯವೆಸಗಿದೆ.
ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹುಟ್ಟಿಬೆಳೆದ ಮಣ್ಣಿನಲ್ಲಿ ಕನ್ನಡಕ್ಕಾಗುತ್ತಿರುವ ಈ ಅವಗಣನೆ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಕಾಸರಗೋಡಿನಲ್ಲಿ ಬಲವಂತದ ಮಲಯಾಳ ಹೇರಿಕೆಯಾಗುತ್ತಿರುವ ಮಧ್ಯೆ, ಕನ್ನಡ ಸೂಚನಾಫಲಕಗಳನ್ನೂ ತೆರವುಗೊಳಿಸುವ ಮೂಲಕ ಇಲ್ಲಿ ಕನ್ನಡ ಭಾಷೆಯನ್ನು ಹಂತಹಂತವಗಿ ದಮನಿಸುವ ಕೆಲಸ ನಡೆಯುತ್ತಿದೆ.
ಪ್ರಾಧಿಕಾರ ಮನವಿ:
ತಲಪ್ಪಾಡಿಯಿಂದ ಕಾಸರಗೋಡು ವರೆಗಿನ ಷಟ್ಪಥ ರಸ್ತೆಯಲ್ಲಿ ನೂತನವಾಗಿ ಅಳವಡಿಸುತ್ತಿರುವ ಸೂಚನಾಫಲಕಗಳಿಂದ ಕನ್ನಡಕ್ಕೆ ಖೊಕ್ ಕೊಟ್ಟಿರುವುದಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ತನ್ನ ವಿರೋಧ ಸೂಚಿಸಿದೆ. ಗಡಿನಾಡು ಕಾಸರಗೋಡಿನಲ್ಲಿ ಹೆದ್ದರಿ ಬದಿ ಸ್ಥಾಪಿಸುತ್ತಿರುವ ಸೂಚನಾಫಲಕಗಳಲ್ಲಿ ಇತರ ಭಾಷೆಯೊಂದಿಗೆ ಕನ್ನಡವನ್ನೂ ಅಳವಡಿಸುವಂತೆ ಹೆದ್ದಾರಿ ಪ್ರಾಧಿಕಾರ ಮುಖ್ಯ ಅಭಿಯಂತಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ತಕ್ಷಣ ಸೂಚನಫಲಕಗಳಲ್ಲಿ ಕನ್ನಡ ಅಳವಡಿಸುವ ಮೂಲಕ ಗಡಿನಾಡ ಕನ್ನಡಿಗರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಪ್ರಾಧಿಕಾರ ಅದ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಹಾಗೂ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿಯ ಪ್ರತಿಯನ್ನು ಚೆನ್ನೈಯಲ್ಲಿರುವ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಣ ವಲಯ ಕಚೇರಿ ಸಹಾಯಕ ಆಯುಕ್ತರಿಗೂ ಕಳುಹಿಸಿಕೊಡಲಾಗಿದೆ.






