ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ವಾಚನಾ ಸಪ್ತಾಹದ ಸಮಾರೋಪ ಹಾಗೂ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಗುರುವಾರ ಶಾಲಾ ರಾಮಕೃಷ್ಣ ರಾವ್ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ಎಸ್.ವಿ. ವಿ.ಎಚ್ ಎಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ, ವಾಗ್ಮಿ ರಾಜಾರಾಮ್ ರಾವ್ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಸಣ್ಣ ಕತೆಗಳ ಮೂಲಕ ಜೀವನದ ಮೌಲ್ಯಗಳ ಕುರಿತು ಹಾಗೂ ಓದುವುದರ ಅಗತ್ಯತೆಯ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನದ ಬಗ್ಗೆ ಶಾಲಾ ಅಧ್ಯಾಪಕ ಮಹಾಬಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರತಿಜ್ಞೆ ಬೋಧಿಸಿದರು. ಅಧ್ಯಾಪಕರಾದ ಹರೀಶ್ ಸುಲಾಯ ಪ್ರಾಯೋಗಿಕವಾಗಿ ಸಿಗರೇಟ್ ಸೇದುವುದರಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿಸಿದರು. ವಾಚನಾ ಸಪ್ತಾಹದಲ್ಲಿ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಗ್ರಂಥಾಲಯದ ವತಿಯಿಂದ ಜರಗಿದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಸುಶಾಂತ್ ಮಯ್ಯ ನಡೆಸಿಕೊಟ್ಟರು.
ಶಾಲಾ ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಕೆ.ಎಂ. ಹಾಗೂ ಶಾಲಾ ಗ್ರಂಥಾಲಯದ ಸಂಚಾಲಕಿ ಪ್ರತಿಭಾಶ್ರೀ ಉಪಸ್ಥಿತರಿದ್ದರು. ಕಿರಿಯ ಪ್ರಾಥಮಿಕ ಎಸ್ ಆರ್ ಜಿ ಕನ್ವಿನರ್ ಸುನಿಲ್ ಕುಮಾರ್ ಸ್ವಾಗತಿಸಿ, ಹಿರಿಯ ಪ್ರಾಥಮಿಕ ಎಸ್ ಆರ್ ಜಿ ಕನ್ವಿನರ್ ಲಕ್ಷ್ಮಿ ಟೀಚರ್ ವಂದಿಸಿದರು. ಅಧ್ಯಾಪಕ ರಘುವೀರ್ ರಾವ್ ಹಾಗೂ ಅರ್ಪಿತಾ ಟೀಚರ್ ನಿರೂಪಿಸಿದರು.



