ಕರೀಂನಗರ: ತೆಲಂಗಾಣದ ಬಾಸರ ಸಮೀಪ ದೇವಾಲಯ ಭೇಟಿಗೂ ಮುನ್ನ ಗೋದಾವರಿ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ಅವರು, 'ಹೈದರಾಬಾದ್‌ನಿಂದ ಸುಮಾರು 20 ಮಂದಿ ಬಾಸರದ ಪ್ರಖ್ಯಾತ ಜ್ಞಾನ ಸರಸ್ವತಿ ದೇಗುಲಕ್ಕೆ ಬಂದಿದ್ದರು.
ಈ ಪೈಕಿ ಐವರು ಬಾಲಕರು ಪವಿತ್ರ ಸ್ನಾನಕ್ಕಾಗಿ ಗೋದಾವರಿ ನದಿಗೆ ಇಳಿದಿದ್ದರು. ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಕ್ಷಣಾ ತಂಡವು ಮೃತದೇಹಗಳನ್ನು ಹೊರತೆಗೆಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ತಿಳಿಸಿದರು.
ದೋಣಿ ಮಗುಚಿ ಒಬ್ಬ ಸಾವು (ಗೋರಖಪುರ ವರದಿ):
ರಾಪ್ತಿ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಇತರ 13 ಮಂದಿ ಈಜಿ ದಡ ಸೇರುವ ಮೂಲಕ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
14 ಜನರಿದ್ದ ದೋಣಿಯು ಗೋರಖಪುರ ಜಿಲ್ಲೆಯ ನೆಟ್ವಾರ್ ಪಟ್ಟಿಯಿಂದ ಧನಿಯಾ ಗ್ರಾಮಕ್ಕೆ ತೆರಳುತ್ತಿತ್ತು ಎಂದು ಅವರು ತಿಳಿಸಿದರು.




