ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಹೊಳೆ, ತೋಡಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿದರೆ, ಜೂ. 17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯ ಮಂಜೇಶ್ವರಂ, ಕಾಸರಗೋಡು, ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಂಬ ಸರ್ಕಾರಿ ಆವರಣದಲ್ಲಿ ವಿಶೇಷ ಶಿಬಿರ ತೆರೆಯಲಾಗಿದೆ. ವೆಳ್ಳರಿಕುಂಡು ತಾಲೂಕಿನ ಮಾಲೋತ್ ಗ್ರಾಮದ ಎಲ್.ಪಿ ಶಾಲೆಯಲ್ಲಿ ಶಿಬಿರ ಕಾರ್ಯನಿರ್ವಹಿಸುತ್ತಿದ್ದು, ಶಿಬಿರದಲ್ಲಿ 10 ಕುಟುಂಬಗಳ 37 ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಇವರಲ್ಲಿ 18 ಪುರುಷರು ಮತ್ತು 19 ಮಹಿಳೆಯರಿದ್ದು, ಇಬ್ಬರು ಗರ್ಭಿಣಿಯರು, 60 ವರ್ಷಕ್ಕಿಂತ ಮೇಲ್ಪಟ್ಟ 6 ಜನರು ಮತ್ತು 2 ಮಕ್ಕಳಿದ್ದಾರೆ.
ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲಕ್ಕ ಎರಡನೇ ಬಾರಿಗೆ ಮಳೆನೀರು ನುಗ್ಗಿದ್ದು, ದೇಗುಲದ ಹೊರಾಂಗಣ ಸಂಪೂರ್ಣ ಜಲಾವೃತವಾಗಿದೆ. ಮೇ ತಿಂಗಳ 29ರಂದು ದೇಗುಲಕ್ಕೆ ಮಳೆನೀರು ನುಗ್ಗಿದ್ದು, ಇಪ್ಪತ್ತು ದಿವಸದೊಳಗೆ ಇದು ಎರಡನೇ ಬಾರಿಗೆ ಮಧುವಾಹಿನಿ ಹೊಳೆನೀರು ದೇಗುಲದೊಳಗೆ ನುಗ್ಗಿದೆ.
ಇದೇ ಸಂದರ್ಭ ಕಳೆದ ವರ್ಷ ಮಧೂರು ದೇಗುಲಕ್ಕೆ ಜೂನ್ 27ರಂದು ಮಳೆನೀರು ನುಗ್ಗಿತ್ತು.
ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನದೊಳಗೆ ನೀರು ನುಗ್ಗಿದ್ದು, ನಾಲ್ಕು ಅಡಿಗೂ ಹೆಚ್ಚಿನ ನೀರು ಒಳಾಂಗಣದಲ್ಲಿ ತುಂಬಿಕೊಂಡಿರುವುದರಿಂದ ಅರ್ಚಕರು ಹಾಗೂ ಇತರ ಸಿಬ್ಬಂದಿ ನೀರಲ್ಲೇ ತೆರಳಿ ಪೂಜಾ ವಿಧಿ ಹಾಗೂ ಇತರ ಕೆಲಸ ನಿರ್ವಹಿಸಿದರು. ಈ ಪ್ರದೇಶದಲ್ಲಿನ ತೋಡಗಳಲ್ಲಿ ತ್ಯಾಜ್ಯ ತುಂಬಿಕೊಳ್ಳುತ್ತಿರುವುದರಿಂದ ಮಳೆನೀರು ಸರಾಗವಾಗಿ ಹರಿದು ಸಾಗದೆ, ವ್ಯಾಪಕ ಸಮಸ್ಯೆ ಗಿದೆ. ದುರಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
PHOTOS: ಮಧೂರು ದೇಗುಲದೊಳಗೆ ಭಕ್ತಾದಿಗಳು ನೀರಿನಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.
: ಶಿರಿಯ ಶ್ರೀಶಂಕರನಾರಯಣ ದೇವಾಲಯದೊಳಗೆ ಮಳೆನೀರು ತುಂಬಿಕೊಂಡಿದೆ.







