HEALTH TIPS

ನಮ್ಮ ಮೇಲೆ ದಾಳಿ ಮಾಡಿದರೆ, ಪಾಕ್ ಸೇರಿ ಉಗ್ರರು ಎಲ್ಲೇ ಅಡಗಿದ್ದರೂ ಬೇಟೆಯಾಡುತ್ತೇವೆ: ಎಸ್ ಜೈಶಂಕರ್

ನವದೆಹಲಿ: ಗಡಿಯಾಚೆಯಿಂದ ಎದುರಾಗುವ ಭಯೋತ್ಪಾದನೆ ವಿರುದ್ಧ ಪ್ರತಿದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ. ಭಾರತದ ಮೇಲೆ ದಾಳಿ ಮಾಡುವವರನ್ನು 'ಅವರು ಪಾಕಿಸ್ತಾನ ಸೇರಿದಂತೆ ಎಲ್ಲೇ ಇದ್ದರೂ' ಭೇಟೆಯಾಡಲಾಗುವುದು ಎಂದು ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಮಂಗಳವಾರ ಎಚ್ಚರಿಸಿದ್ದಾರೆ.

'ಉಗ್ರರು ಭಾರತದ ಮೇಲೆ ದಾಳಿ ಮಾಡಿದರೆ, ಅವರು ಪಾಕಿಸ್ತಾನ ಸೇರಿದಂತೆ ಎಲ್ಲೇ ಅಡಗಿದ್ದರೂ ನಾವು ಅವರನ್ನು ಬೇಟೆಯಾಡುತ್ತೇವೆ. ಭಯೋತ್ಪಾದನೆ ಮುಂದುವರಿಯುವವರೆಗೆ, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಮತ್ತು ನಮ್ಮ ಆತ್ಮರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ನಮ್ಮ ಮೂಲಭೂತ ಕರ್ತವ್ಯವಾಗಿದೆ' ಎಂದು ಫ್ರೆಂಚ್ ದಿನಪತ್ರಿಕೆ ಲೆ ಫಿಗರೊಗೆ ಹೇಳಿದ್ದಾರೆ.

ಭಾರತದ ವಿವಾದವು ಯಾವುದೇ ಒಂದು ನಿರ್ದಿಷ್ಟ ದೇಶದೊಂದಿಗೆ 'ಅಲ್ಲ'. ಸಂಘರ್ಷವು ಭಾರತ ಮತ್ತು ಭಯೋತ್ಪಾದನೆ ನಡುವಿನದ್ದು ಎಂದು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಪ್ರತಿಯಾಗಿ ಭಾರತದ ಆಫರೇಷನ್ ಸಿಂಧೂರ ಕುರಿತು ಹೇಳಿದರು.

ಪಾಕಿಸ್ತಾನದೊಂದಿಗಿನ ಚೀನಾದ ನಿಕಟ ಸಂಬಂಧದ ಕುರಿತು ಮಾತನಾಡಿದ ಜೈಶಂಕರ್, 'ಭಯೋತ್ಪಾದನೆಯಂತಹ ವಿಷಯದಲ್ಲಿ, ನಾವು ಅಸ್ಪಷ್ಟ ಅಥವಾ ದ್ವಿಮುಖ ನೀತಿಗಳನ್ನು ಸಹಿಸುವುದಿಲ್ಲ. ಕೊನೆಯಲ್ಲಿ, ಇದು ನಮ್ಮೆಲ್ಲರಿಗೂ ಸಂಬಂಧಿಸಿದ ಸಮಸ್ಯೆಯಾಗಿದೆ' ಎಂದರು.

ಭಾರತ-ಅಮೆರಿಕ ಸಂಬಂಧಗಳ ಕುರಿತು ಮಾತನಾಡಿದ ಅವರು, 'ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ, ಐವರು ಅಮೆರಿಕನ್ ಅಧ್ಯಕ್ಷರ ಅಡಿಯಲ್ಲಿ ಅಮೆರಿಕದ ಜೊತೆಗಿನ ನಮ್ಮ ಸಂಬಂಧ ನಿರಂತರವಾಗಿ ಬಲಗೊಂಡಿವೆ' ಎಂದು ಹೇಳಿದರು.

ಸುಂಕಗಳನ್ನು ತಪ್ಪಿಸಲು ನಡೆಯುತ್ತಿರುವ ಮಾತುಕತೆಗಳನ್ನು ಅವರು ಎತ್ತಿ ತೋರಿಸಿದರು ಮತ್ತು ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಕ್ವಾಡ್ ಪಾಲುದಾರಿಕೆಯ ಕಾರ್ಯತಂತ್ರದ ಮಹತ್ವವನ್ನು ಪುನರುಚ್ಚರಿಸಿದರು.

ಚೀನಾದ ಬಗ್ಗೆ ಚರ್ಚಿಸುತ್ತಾ, 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ನಡೆದ ಮಿಲಿಟರಿ ಘರ್ಷಣೆಯ ನಂತರ ಸಂಬಂಧಗಳು 'ಕಷ್ಟವಾಗಿದೆ'. 'ನಮಗೆ ಪ್ರಮುಖ ಪ್ರಶ್ನೆಯೆಂದರೆ: ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳುವುದು? ಎನ್ನುವುದಾಗಿದೆ. ಅದು ಇಲ್ಲದೆ, ಉಳಿದೆಲ್ಲವೂ ಪರಿಣಾಮ ಬೀರುತ್ತದೆ. ಆದಾಗ್ಯೂ, ನೇರ ವಿಮಾನಗಳ ಪುನರಾರಂಭ ಸೇರಿದಂತೆ ದ್ವಿಪಕ್ಷೀಯ ವಿನಿಮಯವನ್ನು ಪುನಃಸ್ಥಾಪಿಸುವಲ್ಲಿ ಕೆಲವು ಪ್ರಗತಿಗಳಾಗಿವೆ' ಎಂದು ವಿದೇಶಾಂಗ ಸಚಿವ ಹೇಳಿದರು.

ಭಾರತದ ಆಂತರಿಕ ವೈವಿಧ್ಯತೆ ಮತ್ತು ಅದು ಜಾಗತಿಕ ಗ್ರಹಿಕೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಪಾಶ್ಚಿಮಾತ್ಯರ ಟೀಕೆಯನ್ನು ತಳ್ಳಿಹಾಕಿದ ಜೈಶಂಕರ್, 'ಅದು ಹೆಚ್ಚು ಉತ್ಪ್ರೇಕ್ಷಿತವಾಗಿದೆ ಮತ್ತು ಕೆಲವೊಮ್ಮೆ ಸಂಪೂರ್ಣವಾಗಿ ಸುಳ್ಳಾಗಿರುತ್ತದೆ... ಧರ್ಮವು ನಮ್ಮ ಗುರುತಿನ ಒಂದು ಮುಖ ಮಾತ್ರ. ಅದಕ್ಕಾಗಿಯೇ ನಾನು ನಿಮ್ಮ ಪ್ರಶ್ನೆಯ ಪ್ರಮೇಯವನ್ನು ತಿರಸ್ಕರಿಸುತ್ತೇನೆ' ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries