ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಸ್ಸಾಂ ಭೇಟಿಯನ್ನು 'ಅನಿವಾರ್ಯ ಕಾರಣ' ನೀಡಿ ಮುಂದೂಡಲಾಗಿದೆ.
ರಾಜ್ಯ ಸರ್ಕಾರವು ಜೂನ್ 12ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ನೃತ್ಯ ಕಲಾವಿದೆ ಸೋನಲ್ ಮಾನ್‌ಸಿಂಗ್ ಅವರಿಗೆ 'ಶ್ರೀಮಂತ ಶಂಕರದೇವ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಪ್ರದಾನ ಮಾಡುವವರಿದ್ದರು.
ಅವರು ಅಸ್ಸಾಂನ ಭೇಟಿಯನ್ನು ಮುಂದೂಡುತ್ತಿರುವುದು ಇದು ಎರಡನೇ ಬಾರಿ.
'ರಾಷ್ಟ್ರಪತಿಯವರ ಭೇಟಿಯನ್ನು ಮುಂದೂಡಲಾಗಿದೆ. ಆದರೆ, ಪೂರ್ವನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ' ಎಂದು ಅಸ್ಸಾಂ ರಾಜ್ಯಪಾಲರ ಸಚಿವಾಲಯದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಏ.25ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಪಹಲ್ಗಾಮ್ ಉಗ್ರರ ದಾಳಿ ಹಾಗೂ ಇತರೆ ಬೆಳವಣಿಗೆಗಳಿಂದಾಗಿ ಮುರ್ಮು ಅವರ ಎರಡು ದಿನಗಳ ಭೇಟಿಯನ್ನು ಮುಂದೂಡಲಾಗಿತ್ತು.




