ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖಾ ಪ್ರಬಂಧಕ ಈಶ್ವರ ಕುಲಾಲ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶನಿವಾರ ಸಂಜೆ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ನಿವೃತ್ತ ರೀಜನಲ್ ಮೇನೇಜರ್ ಡಿ. ದಾಮೋದರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಲ್ಯದಲ್ಲಿಯೇ ಉದ್ಯೋಗಕ್ಕೆ ಸೇರಿದ ಈಶ್ವರ್ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿ ಪ್ರಬಂಧಕರ ಹುದ್ದೆಯನ್ನು ಅಲಂಕರಿಸಿ ಹಿರಿಮೆ ಮೆರೆದವರು. `ಕಸ್ಟಮರ್ ಈಸ್ ದ ಕಿಂಗ್ ಆಫ್ ಬ್ಯಾಂಕ್' ಎಂಬ ಧ್ಯೇಯದೊಂದಿಗೆ 4 ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸಿದ ಅಪರೂಪದ ವ್ಯಕ್ತಿ ಇವರಾಗಿದ್ದಾರೆ. ಎಲ್ಲಾ ಉದ್ಯೋಗಿಗಳಿಗೂ ಇವರು ಆದರ್ಶಪ್ರಾಯರಾಗಿ ದುಡಿದಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಇದೀಗ ಬದಿಯಡ್ಕ ಜನತೆಯ ಸಂತೃಪ್ತಿಗೆ ಪಾತ್ರರಾಗಿದ್ದಾರೆ. ಜೀವನದುದ್ದಕ್ಕೂ ಜನರೊಂದಿಗೆ ನಗುನಗುತ್ತಾ ವ್ಯವಹರಿಸುವ ಇವರು ಜೀವನದಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಚೀಫ್ ಮೇನೇಜರ್ ಎಂ.ಬಾಲನ್, ನಿವೃತ್ತ ಅಧ್ಯಾಪಕ ಈಶ್ವರ ರಾವ್ ಮೈಲ್ತೊಟ್ಟಿ, ನಿವೃತ್ತ ಪ್ರಬಂಧಕ ಸುಬ್ರಹ್ಮಣ್ಯ ಶೆಣೈ, ಬದಿಯಡ್ಕ ಶಾಖಾ ಪ್ರಬಂಧಕ ಹರೀಶ್, ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಕುನ್ನಿಲ್ ಶಾಲೆಯ ಸಿಇಒ ವಿಕ್ರಂ ಮಾತನಾಡಿದರು. ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬದಿಯಡ್ಕ ಶಾಖೆಯ ವತಿಯಿಂದ ಈಶ್ವರ ಕುಲಾಲ್ ದಂಪತಿಗಳನ್ನು ಮೈಸೂರು ಪೇಟ ತೊಡಿಸಿ, ಶಾಲು ಫಲಫುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ಗ್ರಾಹಕರನ್ನು ನಾವು ಗೌರವದಿಂದ ಕಾಣುವ ಮೂಲಕ ಅವರ ಪ್ರೀತಿಯನ್ನು ಸಂಪಾದಿಸಿದ್ದೇನೆ. ಅವರ ಉತ್ತಮವಾದ ಬೆಂಬಲವು ನನ್ನ ಕರ್ತವ್ಯವನ್ನು ನಿರ್ವಹಿಸಲು ಪ್ರೇರಣೆಯಾಯಿತು ಎಂದರು. ಬ್ಯಾಂಕ್ ಸಿಬ್ಬಂದಿಗಳಾದ ಶೃತಿ ಸ್ವಾಗತಿಸಿ, ಸ್ನೇಹ ವಂದಿಸಿದರು. ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.




.jpg)

