ಪೆರ್ಲ: ಕಾಟುಕುಕ್ಕೆ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಲು ಬಹು ಜನರ ಮನವಿಗೆ ತಿರಸ್ಕಾರ ತೋರುವ ಕೇರಳ ಸರಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಎದುರಾಗಿ ಯುಡಿಎಫ್ ಎಣ್ಮಕಜೆ ಪಂಚಾಯತು ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಪೆರ್ಲ ಪೇಟೆಯಲ್ಲಿ ನಡೆಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿ, ಈ ರಸ್ತೆಯ ಅಭಿವೃದ್ಧಿಗೆ ಅನವರತ ಬೇಡಿಕೆ ಇರಿಸಲಾಗಿದ್ದರೂ ಸಂಬಂಧಪಟ್ಟ ರಾಜ್ಯ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆ ಕಡೆಗಣಿಸುತ್ತಾ ಬರುತ್ತಿದೆ. ಪ್ರಯತ್ನಗಳೆಲ್ಲಾ ವ್ಯರ್ಥವಾಗುತ್ತಿದ್ದು ಜನರ ಮತ ಹಾಗೂ ತೆರಿಗೆ ತೆಗೆದ ಹಣದಲ್ಲಿ ಸರ್ಕಾರ ವಾರ್ಷಿಕ ಸಂಭ್ರಮ ಆಚರಿಸುವಲ್ಲಿ ದುಂದು ವೆಚ್ಚ ಮಾಡುತ್ತಿದೆ. ಇನ್ನಾದರೂ ಆರ್ಹ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳದಿದ್ದರೆ ವಿಧಾನ ಸಭೆಯ ಮುಂದೆ ಜನ ಬೇಡಿಕೆಗಾಗಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಮಾತನಾಡಿ ಆಸ್ತಿಕ ಶ್ರದ್ಧಾ ಕೇಂದ್ರದ ಮುಖ್ಯ ರಸ್ತೆಯಾದ ಇದನ್ನು ಕಳೆದ ಬ್ರಹ್ಮಕಲಶೋತ್ಸವ ಸಂದರ್ಭ ನವೀಕರಿಸಲಾಗದ್ದು ಅಕ್ಷಮ್ಯ ಅಪರಾಧ ಈ ಹಿಂದೆ ಪಂಚಾಯತ್ ಕೈವಶ ಇದ್ದ ರಸ್ತೆಯನ್ನು ಪಿಡಬ್ಲುಡಿಗೆ ನೀಡಿರುವುದರಿಂದ ಅಭಿವೃದ್ಧಿಗೆ ನಿರ್ಲಕ್ಷ್ಯವಾಗಿದ್ದಲ್ಲಿ ಈ ರಸ್ತೆಯನ್ನು ಪಂಚಾಯತಿಗೆ ಹಸ್ತಾಂತರಿಸಲಿ ಅಭಿವೃದ್ಧಿ ಏನೆಂಬುದನ್ನು ಮಾಡಿ ತೋರಿಸುತ್ತೇವೆ ಎಂದರು.
ಎಣ್ಮಕಜೆ ಕಾಂಗ್ರೆಸ್ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು. ಪಂ.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ನೇತಾರರಾದ ಮಿತ್ತೂರು ಪುರುಷೋತ್ತಮ ಭಟ್, ಎ.ಕೆ.ಶೇರಿಫ್, ಸಿದ್ಧಿಕ್ ಹಾಜಿ ಖಂಡಿಗೆ, ಆಮು ಅಡ್ಕಸ್ಥಳ, ಸಿದ್ಧಿಕ್ ವಳಮುಗರು, ಮಾಯಿಲ ನಾಯ್ಕ್, ಅಬ್ದುಲ್ ರಸಾಕ್ ನಲ್ಕ,ಸೆಮಿಲ್ ಪೆರ್ಲ, ಆಶ್ರಫ್ ಅಮೆಕ್ಕಳ,ಅಬ್ದುಲ್ಲ ಕುರೆಡ್ಕ ,ಇಕ್ಬಾಲ್ ಪೆರ್ಲ,ಹಕೀಂ ಖಂಡಿಗೆ,ಲೋಕನಾಥ ಮಾಸ್ತರ್, ಮೊದಲಾದವರು ಭಾಗವಹಿಸಿದ್ದರು. ಯುಡಿಎಫ್ ಸಂಚಾಲಕ ಹಮೀದಾಲಿ ಕಂದಲ್ ಸ್ವಾಗತಿಸಿ ಅಬ್ದುಲ್ ರಸಾಕ್ ನೂರ ವಂದಿಸಿದರು.




.jpg)

