ಕಾಸರಗೋಡು: ಜಿಲ್ಲೆಯಲ್ಲಿ ಜೂ. 2ರಂದು ಶಾಲಾ ತರಗತಿ ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳು ಸಜ್ಜುಗೊಂಡಿದೆ. ಶಾಲಾ ಮಟ್ಟ, ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲಾ ಪ್ರವೇಶೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿಯ ಜಿಲ್ಲಾ ಶಾಲಾ ಪ್ರವೇಶೋತ್ಸವ ಮಡಿಕೈ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. ಬೆಳಗ್ಗೆ 10ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕಾಞಂಗಾಡು ಶಾಸಕ ಇ. ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಲ್ಲದೆ, ಜಿಲ್ಲೆಯ 592 ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶೋತ್ಸವ ಸಮಾರಂಭ ಆಯೋಜಿಸಲಾಗಿದೆ. ಪ್ರವೇಶೋತ್ಸವದ ಚಟುವಟಿಕೆಗಳನ್ನು ಸಂಪೂರ್ಣ ಹಸಿರು ಶಿಷ್ಟಾಚಾರದೊಂದಿಗೆ ನಡೆಸಲಗುವುದು. ನಡೆಸಲಾಗುತ್ತದೆ. ಈ ಬಗ್ಗೆ ಸಮಾರಂಭ ಆಯೋಜಕರಿಗೆ ಶಿಕ್ಷಣ ಇಲಾಖೆ ಈಗಾಗಲೇ ನಿರ್ದೇಶನ ನೀಡಿದೆ.
ಉದ್ಘಾಟನಾ ದಿನದಿಂದ ಪ್ರಾರಂಭಿಸಿ, ಶಾಲಾ ದಿನದಂದು ಎರಡು ವಾರಗಳ ಕಾಲ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಒಂದು ಗಂಟೆಯ ಜಾಗೃತಿ ತರಗತಿಯನ್ನು ನಡೆಸಲು ತೀರ್ಮಾನಿಸಲಾಗಿದೆ.






