HEALTH TIPS

ಕಛ್‌ನ ಪಾಕ್ ಗಡಿಯಲ್ಲಿ 'ಆಪರೇಷನ್ ಸಿಂಧೂರ' ನೆನಪಿನಲ್ಲಿ ಉದ್ಯಾನವನ ನಿರ್ಮಿಸಲಿರುವ ಗುಜರಾತ್ ಸರ್ಕಾರ

ಅಹ್ಮದಾಬಾದ್: ರಕ್ಷಣಾ ಪಡೆಗಳಿಗೆ ಗೌರವದ ಮತ್ತು ರಾಷ್ಟ್ರವು ಪ್ರದರ್ಶಿಸಿದ್ದ ಏಕತೆಯ ಸಂಕೇತವಾಗಿ ಗುಜರಾತ ಸರ್ಕಾರ 'ಆಪರೇಷನ್ ಸಿಂಧೂರ' ನೆನಪಿನಲ್ಲಿ ಉದ್ಯಾನವನವೊಂದನ್ನು ನಿರ್ಮಿಸಲಿದೆ ಎಂದು indianexpress.com ವರದಿ ಮಾಡಿದೆ.

'ಸಿಂಧೂರ ವನ' ಎಂದು ಕರೆಯಲಾಗುವ ಸ್ಮಾರಕವು ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಕಛ್ ಜಿಲ್ಲೆಯಲ್ಲಿ ತಲೆಯೆತ್ತಲಿದೆ.

ಗುಜರಾತಿನಲ್ಲಿ ನಡೆದಿದ್ದ ಪಾಕ್ ದಾಳಿಗಳ ಬಿಸಿಯನ್ನು ಈ ಜಿಲ್ಲೆ ಅನುಭವಿಸಿತ್ತು. ಸ್ಮಾರಕವು ಒಂದೂವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪ್ರಾಥಮಿಕ ಕೆಲಸಗಳು ಈಗಾಗಲೇ ಆರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದರು.

'ಆಪರೇಷನ್ ಸಿಂಧೂರ' ಸಮಯದಲ್ಲಿ ಸಮಾಜ,ಸೇನೆ, ವಾಯುಪಡೆ,ಬಿಎಸ್‌ಎಫ್ ಮತ್ತು ಇತರ ಪಡೆಗಳು ಪ್ರದರ್ಶಿಸಿದ್ದ ಏಕತೆಯ ನೆನಪಿಗಾಗಿ ಅರಣ್ಯ ಇಲಾಖೆಯು ಸ್ಮಾರಕ ಉದ್ಯಾನವನ್ನು ನಿರ್ಮಿಸಲಿದೆ ಎಂದು ಕಛ್ ಜಿಲ್ಲಾಧಿಕಾರಿ ಆನಂದ ಪಟೇಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಭುಜ್-ಮಾಂಡ್ವಿ ರಸ್ತೆಯಲ್ಲಿನ ಮಿರ್ಜಾಪರದಲ್ಲಿಯ ಅರಣ್ಯ ಇಲಾಖೆಗೆ ಸೇರಿದ ಎಂಟು ಹೆಕ್ಟೇರ್ ಭೂಮಿಯಲ್ಲಿ ದಟ್ಟಾರಣ್ಯ ಅಥವಾ 'ವನ ಕವಚ್' ನಿರ್ಮಾಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಬಳಿಕ ಗುಜರಾತಿಗೆ ತನ್ನ ಮೊದಲ ಭೇಟಿ ಸಂದರ್ಭದಲ್ಲಿ ಸಾರ್ವಜನಿಕ ಭಾಷಣವನ್ನು ಮಾಡಿದ್ದ ಸ್ಥಳವೂ ಇದರಲ್ಲಿ ಸೇರಿದೆ ಎಂದರು.

ಸಿಂಧೂರ ವನವು ಎ.22ರ ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗಾಗಿ ಮೀಸಲಾದ ಪ್ರದೇಶವನ್ನೂ ಹೊಂದಿರಲಿದೆ. ದಾಳಿಯಲ್ಲಿ ಕೊಲ್ಲಲ್ಪಟ್ಟ 26 ಜನರಲ್ಲಿ ಮೂವರು ಗುಜರಾತ್ ನಿವಾಸಿಗಳಾಗಿದ್ದರು.

ಸಿಂಧೂರ ವನವು ಎಂಟು ಹೆಕ್ಟೇರ್ ಭೂಮಿಯಲ್ಲಿ ಗಿಡಮೂಲಿಕೆಗಳು, ಪೊದೆಗಳು ಮತ್ತು ಮರಗಳು ಸೇರಿದಂತೆ ಹೆಚ್ಚಿನ ಸಾಂದ್ರತೆಯ ನೆಡುತೋಪು ಆಗಿರಲಿದೆ. ಇದು ನಗರ ಪ್ರದೇಶದಲ್ಲಿ ವನ ಕವಚ್ ಅಥವಾ ಕಿರು ಅರಣ್ಯದ ರೂಪವನ್ನು ಪಡೆದುಕೊಳ್ಳಲಿದ್ದು,ಸಿಂಧೂರ ಸಸ್ಯಗಳನ್ನು ಪ್ರಮುಖವಾಗಿ ನೆಡಲಾಗುವುದು,ಜೊತೆಗೆ ಬಿಎಸ್‌ಎಫ್,ಸೇನೆ,ವಾಯುಪಡೆ ಮತ್ತು ನೌಕಾಪಡೆಯಂತಹ ವಿವಿಧ ವಿಭಾಗಗಳು ಸಿದ್ಧಪಡಿಸುವ ಭಿತ್ತಿಚಿತ್ರಗಳನ್ನೂ ಒಳಗೊಂಡಿರಲಿದೆ ಎಂದು ಕಛ್ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್ ತಿಳಿಸಿದರು.

ಸ್ಥಳೀಯ ವಾತಾವರಣ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಸಿಂಧೂರ ಸಸ್ಯಗಳ ಜೊತೆಗೆ 35 ವಿವಿಧ ಸಸ್ಯ ಪ್ರಭೇದಗಳನ್ನು ನೆಡಲಾಗುವುದು. ಪ್ರತಿ ಹೆಕ್ಟೇರ್‌ಗೆ 10,000 ಸಸ್ಯಗಳನ್ನು ನೆಡಲು ಯೋಜಿಸಲಾಗಿದ್ದು,ಇದು ಭುಜ್‌ನ ಅತ್ಯಂತ ದಟ್ಟ ಕಾಡುಗಳಲ್ಲಿ ಒಂದಾಗಲಿದೆ ಎಂದರು.

ಸಿಂಧೂರ ವನಕ್ಕೆ ಭೇಟಿ ನೀಡುವವರು 'ಆಪರೇಷನ್ ಸಿಂಧೂರ' ಸಂದರ್ಭದಲ್ಲಿ ಬಳಸಲಾಗಿದ್ದ ಯುದ್ಧೋಪಕರಣಗಳು ಮತ್ತು ವಿಮಾನದ ಪ್ರತಿಕೃತಿಗಳನ್ನು ವೀಕ್ಷಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries