ಗ್ಯಾಂಗ್ಟಕ್: ಸೇನಾ ಶಿಬಿರಕ್ಕೆ ಭೂಕುಸಿತ ಅಪ್ಪಳಿಸಿದ್ದರಿಂದ ನಾಪತ್ತೆಯಾಗಿರುವ ಆರು ಮಂದಿ ಯೋಧರ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಾಗಿ ಮಂಗಳವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 23 ಮಂದಿ ಸದಸ್ಯರ ತಂಡವನ್ನು ಉತ್ತರ ಸಿಕ್ಕಿಂನ ಛಾತೆನ್‌ಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವು ಸ್ಯಾಟಲೈಟ್ ಫೋನ್‌ಗಳು ಹಾಗೂ ಅತ್ಯಗತ್ಯ ತುರ್ತು ಸಾಧನಗಳಿಂದ ಸಜ್ಜಿತವಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ಹೊತ್ತೊಯ್ಯುತ್ತಿರುವ ಹೆಲಿಕಾಪ್ಟರ್ ಮಂಗಳವಾರ ಪಾಕ್ಯಾಂಗ್ ವಿಮಾನ ನಿಲ್ದಾಣದಿಂದ ಚಾತೆನ್‌ನತ್ತ ನಿರ್ಗಮಿಸಿದೆ.
ಇದಕ್ಕೂ ಮುನ್ನ, ಚಾತೆನ್ ಬಳಿಯ ಸೇನಾ ಶಿಬಿರದ ಬಳಿ ಸಂಭವಿಸಿದ್ದ ಭೂಕುಸಿತದಲ್ಲಿ ಮೂವರು ಸೇನಾ ಸಿಬ್ಬಂದಿಗಳು ಮೃತಪಟ್ಟು, ಆರು ಮಂದಿ ಯೋಧರು ನಾಪತ್ತೆಯಾಗಿದ್ದರು.




