ತಿರುವನಂತಪುರಂ: ಪಿಎಂ ಶ್ರೀ ಯೋಜನೆಗೆ ಸಹಿ ಹಾಕುವುದಿಲ್ಲ ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಅವರು ಪುನರುಚ್ಚರಿಸಿದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಯೋಜನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆ ಪ್ರತಿನಿಧಿಗಳೊಂದಿಗೆ ಸಚಿವರು ಕರೆದಿದ್ದ ಸಭೆಯಲ್ಲಿ, ವಿವಿಧ ವಿದ್ಯಾರ್ಥಿ ಸಂಘಟನೆಗಳು ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸಿದವು. ಎಬಿವಿಪಿ ಸಭೆಯಿಂದ ದೂರ ಉಳಿದಿತ್ತು.
ಸಚಿವರು ಕರೆದಿದ್ದ ಚರ್ಚೆಯಲ್ಲಿ ಎಸ್‍ಎಫ್‍ಐ, ಎಐಎಸ್‍ಎಫ್, ಕೆಎಸ್‍ಯು, ಎಐಡಿಎಸ್‍ಒ ಸೇರಿದಂತೆ ವಿದ್ಯಾರ್ಥಿ ಸಂಘಟನೆ ಪ್ರತಿನಿಧಿಗಳು ಭಾಗವಹಿಸಿದ್ದರು. ಸರ್ಕಾರ ಯೋಜನೆಗೆ ಸಹಿ ಹಾಕದಿದ್ದರೆ, ಸಭೆಯನ್ನು ಬಹಿಷ್ಕರಿಸಿ ಯೋಜನೆ ಜಾರಿಗೆ ಬರುವವರೆಗೆ ಪ್ರತಿಭಟನಾ ಹಾದಿಯಲ್ಲಿ ಮುಂದುವರಿಯುತ್ತೇವೆ ಎಂಬುದು ಎಬಿವಿಪಿಯ ನಿಲುವು ವ್ಯಕ್ತಪಡಿಸಿತ್ತು.
ಈ ಮಧ್ಯೆ, ಪಿಎಂ ಶ್ರೀ ಸಂಘ ಪರಿವಾರದ ಕಾರ್ಯಸೂಚಿಯಾಗಿದೆ. ಕೇರಳಕ್ಕೆ ಅರ್ಹವಾದ ಮೊತ್ತವನ್ನು ನೀಡದಿದ್ದರೆ ಕೇಂದ್ರ ಸಚಿವರು ಕೇರಳದ ರಸ್ತೆಯಲ್ಲಿ ನಡೆಯಲು ಸಾಧ್ಯವಾಗದು ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಪಿ.ಎಸ್. ಸಂಜೀವ್ ಬೆದರಿಕೆ ಹಾಕಿದ್ದಾರೆ.





