ಉಪ್ಪಳ: ಬಹು ಊರುಗಳನ್ನು ಸಂಪರ್ಕಿಸುವ ದೇರಂಬಳ ಕಾಲು ಸೇತುವೆ ಕುಸಿದು ಬಿದ್ದಿದ್ದು, ಯಾವುದೇ ಬದಲಿ ಪ್ರಕ್ರಿಯೆಗಳಿಲ್ಲದೆ ಜನರು ಅತಂತ್ರರಾಗಿದ್ದಾರೆ.
ಮಂಗಲ್ಪಾಡಿ, ಮೀಂಜ ಪಂಚಾಯತಿ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು ಈಗ ಸಂಚಾರ ದುಸ್ತರವಾಗಿದೆ. ಹತ್ತು ಕಿ.ಮೀ ಅಧಿಕ ಸುತ್ತು ಬಳಸಿ ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆಯೆಂದು ಸ್ಥಳೀಯರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ದೇರಂಬಳ,ಚಿಗುರುಪಾದೆ,ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಮುರಿದು ಬಿದ್ದ ಸೇತುವೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಊರವರ ಬೇಡಿಕೆ ಮಾತ್ರ ಈಡೇರಲೇ ಇಲ್ಲ.
ದೇರಂಬಳ ಹೊಳೆಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದು ವರ್ಷಗಳು ಸಂದರೂ ಆಡಳಿತಾಧಿಕಾರಿಗಳು ಪರಿಸ್ಥಿತಿಯನ್ನು ವೀಕ್ಷಿಸಿದರೂ ಯಾವುದೇ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿಲ್ಲ ಎಂದು ಸ್ಥಳೀಯರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ವಿವಿಧ ಕೆಲಸಗಳಿಗೆ ತೆರಳುವವರಿಗೆ ಈ ಸೇತುವ ಸುಗಮ ಸಂಚಾರದ ಕೊಂಡಿಯಾಗಿತ್ತು. ಆದರೆ ಈ ಭಾಗದ ಜನರ ಸಂಚಾರ ಮೊಟಕುಗೊಂಡು ಕಷ್ಟಪಡುವಂತಾಗಿದೆ. ಊರಿನ ಸ್ಥಳೀಯ ಯುವಕರು ಸೇರಿ ತಾತ್ಕಾಲಿಕ ಪರಿಹಾರಕ್ಕಾಗಿ ಕಳೆದ ಸಲ ಕಂಗಿನ ಸಂಕ ನಿರ್ಮಿಸಿದ್ದರು. ಆದರೆ ಅದು ಮೊನ್ನೆಯ ಹಠಾತ್ ಮಳೆಗೆ ನದಿ ನೀರಿನ ರಭಸಕ್ಕೆ ಕೊಚ್ಚಿ ನಾಮಾವಶೇಷವಾಗಿದೆ. ಜೊತೆಗೆ ತಾತ್ಕಾಲಿಕ ಕಂಗಿನ ಮರದ ಸಂಕವನ್ನು ನಿರ್ಮಾಣ ಮಾಡಲು ಸಾಧ್ಯವಾಗದ ರೀತಿ ಕಾಂಕ್ರೀಟ್ ಪಿಲ್ಲರ್ ಗಳು ಬಾಗಿಕೊಂಡಿದ್ದು ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹಲವು ಬಾರಿ ಒತ್ತಾಯಿಸಿರುವರು ಅಧಿಕಾರಿಗಳು ಮಾತ್ರ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರ ಅವಲತ್ತುಕೊಂಡಿದ್ದಾರೆ.
ಅಭಿಮತ:
ಬಸ್ಸುಗಳು ಓಡಾಡದ ಪ್ರದೇಶಗಳಿಗೆ ಸಂಪರ್ಕ ಸೇತುವೆಯಾಗಿದ್ದ ದೇರಂಬಳ ಸೇತುವೆ ಮುರಿದು ಬಿದ್ದು ವರ್ಷಗಳಾದರೂ ಜನರ ಬೇಡಿಕೆಗೆ ಯಾವುದೇ ಸ್ಪಂದನೆಗಳು ದೊರೆತಿಲ್ಲ. ಯುವಕರು ಸೇರಿ ನಿರ್ಮಿಸಿದ ತಾತ್ಕಾಲಿಕ ಸಂಕವೂ ಇದೀಗ ಕೊಚ್ಚಿ ಹೋಗಿದ್ದು ಶಾಶ್ವತ ಸಂಕವೇ ಇದಕ್ಕಿರುವ ಪರಿಹಾರ. ಸಂಬಂಧಪಟ್ಟ ಅಧಿಕಾರಿಗಳು ಊರಿನ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.
-ಲೋಕೇಶ್ ನೋಂಡ ಸ್ಥಳೀಯರು ಹಾಗೂ ಬಿಜೆಪಿ ಮಂಡಲ ಉಪಾಧ್ಯಕ್ಷರು.




.jpg)

