ಕಾಸರಗೋಡು: ಸಮಾಜದ ಎಲ್ಲಾ ವರ್ಗದ ಜನತೆಗೂ ಭೂಮಿ ಲಭ್ಯವಾಗಿಸುವುದರ ಜತೆಗೆ ಅವರಿಗೆ ವಸತಿ ನಿರ್ಮಣಕ್ಕೆ ಅಗತ್ಯ ಸೌಕರ್ಯ ಒದಗಿಸಿಕೊಡಲಗುವುದು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಸಚಿವ ಒ.ಆರ್.ಕೇಳು ತಿಳಿಸಿದ್ದಾರೆ. ಅವರು ಪಣತ್ತಡಿ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್‍ನ ಕಮ್ಮಾಡಿಯಲ್ಲಿ ಪ್ರಾಕೃತಿಕ ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಚಟುವಟಿಕೆಗಳ ಅಂಗವಾಗಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯು ತಲಾ 6 ಲಕ್ಷ ರೂ. ವೆಚ್ಚದಲ್ಲಿ ಹತ್ತು ಕುಟುಂಬಗಳಿಗೆ ನಿರ್ಮಿಸಲಾದ ಮನೆಗಳ ಕೀಲಿಕೈ ಹಸ್ತಾಂತರಿಸಿ ಮಾತನಾಡಿದರು.
"ಎಲ್ಲರಿಗೂ ಭೂಮಿ, ಎಲ್ಲರಿಗೂ ಹಕ್ಕುಪತ್ರ" ಎಂಬ ಸರ್ಕಾರದ ಧ್ಯೇಯದನ್ವಯ ಕೇರಳದ ಎಲ್ಲಾ ತಾಲ್ಲೂಕುಗಳಲ್ಲಿ ಎಲ್ಲಾ ಜನರಿಗೆ ಭೂಮಿ ಹಾಗೂ ಹಕ್ಕು ಪತ್ರಗಳನ್ನು ಅದಾಲತ್ ಪ್ರಕ್ರಿಯೆ ಮೂಲಕ ಲಭ್ಯವಾಗುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಲೈಫ್ ಅಂಡ್ ಸೇಫ್ ಯೋಜನೆಗಳ ಮೂಲಕ ಪರಿಶಿಷ್ಟ ಪಂಗಡಗಳಿಗೆ ಸುರಕ್ಷಿತ ವಸತಿ ಖಾತ್ರಿಪಡಿಸಲಾಗುವುದು ಎಂದು ಅವರು ಹೇಳಿದರು.
ಕಮ್ಮಾಡಿಯಿಂದ ಮೂರು ಕಿ.ಮೀ ದೂರದಲ್ಲಿರುವ ಬಾಟೋಲಿ ಎಂಬ ಸ್ಥಳದಲ್ಲಿ, ವಿದ್ಯುತ್ ಮತ್ತು ರಸ್ತೆ ಸೌಲಭ್ಯವಿರುವ 84 ಸೆಂಟ್ಸ್ ಕಂದಾಯ ಭೂಮಿಯನ್ನು ಪತ್ತೆಹಚ್ಚಿ, ಪ್ರತಿ ಕುಟುಂಬಕ್ಕೆ ಆರು ಸೆಂಟ್ಸ್ ಜಾಗ ಹಂಚಿಕೆ ಮಾಡಿ ಇಲ್ಲಿ ಮನೆ ನಿರ್ಮಿಸಲಾಗಿದೆ.
ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಮಧುಸೂದನನ್ ವರದಿ ಮಂಡಿಸಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಕುಡಿಯುವ ನೀರಿನ ಸೌಲಭ್ಯ ಉದ್ಘಾಟಿಸಿದರು. ಕಾಸರಗೋಡು ಎಡಿಎಂಪಿ ಅಖಿಲ್, ಪಣತ್ತಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ ಎಂ ಕುರಿಯಾಕೋಸ್, ಪರಪ್ಪ ಬ್ಲಾಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ ಪದ್ಮಕುಮಾರಿ ಮೊದಲಾದವರು ಉಪಸ್ಥಿತರಿದ್ದರು.


