ಕಾಸರಗೋಡು: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಕೆಎಸ್‍ಇಬಿ ಲಿಮಿಟೆಡ್ ಜಾರಿಗೆ ತರುತ್ತಿರುವ ವಿವಿಧ ಆರ್‍ಡಿಎಸ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಸಂಸದ ರಾಜಮೋಹನ್ ಉನ್ಣಿತ್ತಾನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿದ್ಯುತ್ ಸಮಿತಿ ಸಭೆ ಆಯೋಜಿಸಲಾಗಿತ್ತು.
ಕೆಎಸ್‍ಇಬಿ ಲಿಮಿಟೆಡ್ ವತಿಯಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದೂ ಅನಿವಾರ್ಯವಾಗಿದೆ. ಕೇಂದ್ರದ ಇಂತಹ ಯೋಜನೆಯ ಪ್ರಯೋಜನ ಸಮಾಜದ ಅತ್ಯಂತ ಕೆಳಸ್ತರಕ್ಕೂ ಲಭ್ಯವಾಗಬೇಕು ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿಬಾಲಕೃಷ್ಣನ್, ಕೆಎಸ್‍ಇಬಿ ಲಿಮಿಟೆಡ್‍ನ ಡೆಪ್ಯುಟಿ ಚೀಫ್ ಇಂಜಿನಿಯರ್ ಎಸ್.ಬಿ ಸುರೇಶ್ ಕುಮಾರ್, ಡೆಪ್ಯೂಟಿ ಕಲೆಕ್ಟರ್ ಕೆ ಅಜೀಶ್, ಕೆಎಸ್‍ಇಬಿ ಎಕ್ಸಿಕ್ಯೂಟಿವ್ ಎಂಜಿನಿಯರ್‍ಗಳಾದ ನಾಗರಾಜ್ ಭಟ್, ಟಿ.ಪಿ. ಆಶಾ, ಪ್ರಸರಣ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಂಜಿತ್ ಲಾಲ್ ಮತ್ತು ಇತರರು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಒಟ್ಟು 120.5 ಕೋಟಿ ರೂ. ವೆಚ್ಚದ ಐದು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳಲ್ಲಿಪ್ರಸರಣ ವಲಯದ ಅಧೀನದಲ್ಲಿ ಮುಳ್ಳೇರಿಯಾ-ಬದಿಯಡ್ಕ 33 ಕೆವಿ ಮಾರ್ಗದ ನವೀಕರಣ ಯೋಜನೆಯು ಡಿಸೆಂಬರ್ 2024 ರಲ್ಲಿ ಪೂರ್ಣಗೊಂಡಿದೆ. ವಿತರಣಾ ವಲಯದ ಅಧೀನದಲ್ಲಿ ನಾಲ್ಕು ಯೋಜನೆಗಳಲ್ಲಿ ಮೂರು ಕಾಮಗಾರಿ ಡಿಸೆಂಬರ್ 2024 ರಲ್ಲಿ ಪ್ರಾರಂಭವಾಗಿ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನೊಂದು ಕಾಮಗಾರಿ ಈ ವರ್ಷದ ಜುಲೈನಲ್ಲಿ ಪ್ರಾರಂಭವಾಗಿ 2026 ರ ಜನವರಿಯಲ್ಲಿ ಪೂರ್ಣಗೊಳ್ಳಲಿರುವುದಾಗಿ ಕೆಎಸ್‍ಇಬಿ ಉಪ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದರು.
ಪಿವಿಟಿಜಿ ಯೋಜನೆಯಲ್ಲಿ ಸೇರಿಸಲಾದ 22 ಮನೆಗಳನ್ನು ಈಗಾಗಲೇ ಈ ಯೋಜನೆಯಲ್ಲಿ ಸೇರಿಸುವ ಮೂಲಕ ವಿದ್ಯುದ್ದೀಕರಿಸಲಾಗಿದೆ,ಪ್ರಧಾನ ಮಂತ್ರಿ ಜುಗಾ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ 193 ಮನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


