ಟೆಹರಾನ್/ಜೆರುಸಲೇಂ/ವಿಯೆನ್ನಾ: ಇರಾನ್‌ನ ಫೋರ್ಡೊ ಪರಮಾಣು ಘಟಕದ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿದೆ. ಫೋರ್ಡೊ ಸೇರಿದಂತೆ ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕವು ಭಾನುವಾರ ಭಾರಿ ತೂಕದ ಬಾಂಬ್‌ಗಳನ್ನು ಬೀಳಿಸಿತ್ತು.
ಮೂರೂ ಪರಮಾಣು ಘಟಕಗಳಲ್ಲಿ ಫೋರ್ಡೊ ಘಟಕವು ಭಾರಿ ಸುರಕ್ಷಿತ ಎನ್ನಲಾಗಿತ್ತು. ವಾಯು ದಾಳಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪರ್ವತವನ್ನು ಕೊರೆದು ಸುಮಾರು 80ರಿಂದ 90 ಮೀಟರ್ ಆಳದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.
'ಶೇ 60ರಷ್ಟು ಶುದ್ಧತೆಯ ಯುರೇನಿಯಂ ಖನಿಜ ಇರುವ ಈ ಘಟಕವನ್ನು ತಲುಪುವ ದಾರಿಯನ್ನು ಧ್ವಂಸ ಮಾಡಿದ್ದೇವೆ' ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. 'ನಮ್ಮ ದಾಳಿಯಿಂದ ಘಟಕಗಳು ಸಂಪೂರ್ಣವಾಗಿ ನಾಶವಾಗಿವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಅಮೆರಿಕವು ಪರಮಾಣು ಘಟಕಗಳ ಮೇಲೆ ದಾಳಿ ಮಾಡುವ ಮುನ್ನವೇ ಸುಮಾರು 400 ಕೆ.ಜಿ ಯುರೇನಿಯಂ ದಾಸ್ತಾನನ್ನು ಇರಾನ್ ಬೇರೆಡೆಗೆ ಸ್ಥಳಾಂತರಿಸಿತ್ತು ಎನ್ನುವ ಮಾತೂ ಕೇಳಿಬರುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಎಷ್ಟರ ಮಟ್ಟಿಗೆ ಹಾನಿಗಳಾಗಿವೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ಆದರೆ, ಕೆಲವು ಸುದ್ದಿ ಸಂಸ್ಥೆಗಳು ಉಪಗ್ರಹಗಳ ಚಿತ್ರಗಳನ್ನು ಅವಲೋಕಿಸಿ ಹಾನಿಯ ಅಂದಾಜು ಮಾಡಲು ಯತ್ನಿಸಿವೆ.




