ನವದೆಹಲಿ: ದೇಶದ ಎಲ್ಲ ಐಐಟಿಗಳಿಗೆ ಪ್ರವೇಶ ಪಡೆದುಕೊಳ್ಳುವುದಕ್ಕಾಗಿ ನಡೆಸುವ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ದೆಹಲಿ ವಲಯದ ರಜಿತ್ ಗುಪ್ತಾ ಅವರು ಪರೀಕ್ಷೆಯಲ್ಲಿ ಈ ಬಾರಿ ಮೊದಲ ರ್‍ಯಾಂಕ್ ಗಳಿಸಿದ್ದಾರೆ.
ಐಐಟಿ ಕಾನ್ಪುರವು ಈ ಬಾರಿಯ ಪರೀಕ್ಷೆಯನ್ನು ಏರ್ಪಡಿಸಿತ್ತು.
360 ಅಂಕಗಳಲ್ಲಿ ರಜಿತ್ ಗುಪ್ತಾ ಅವರು 332 ಗಳಿಸಿದ್ದಾರೆ. ಹರಿಯಾಣದ ಸಕ್ಷಮ್ ಜಿಂದಾಲ್ ಅವರು ಎರಡನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಈ ಇಬ್ಬರೂ ರಾಜಸ್ಥಾನದ ಕೋಟಾದಲ್ಲಿ ತರಬೇತಿ ಪಡೆದುಕೊಂಡಿದ್ದರು. ಮಹಿಳಾ ಅಭ್ಯರ್ಥಿಗಳ ಪೈಕಿ ಕಾನ್ಪುರ ವಲಯದ ದೇವದತ್ತಾ ಮಾಝಿ ಅವರು ಮೊದಲ ಸ್ಥಾನ ಗಳಿಸಿದ್ದಾರೆ. ಇವರಿಗೆ 312 ಅಂಕಗಳು ದೊರೆತಿವೆ.
ಮೇ 18ರಂದು ಜೆಇಇ- ಅಡ್ವಾನ್ಸ್ಡ್‌ಪರೀಕ್ಷೆ ನಡೆದಿತ್ತು.
ರ್‍ಯಾಂಕ್ ಲೆಕ್ಕಾಚಾರ ಹೇಗೆ?:
'ರ್‍ಯಾಂಕ್ ನೀಡವ ವೇಳೆ ಗಣಿತ, ಭೌತಶಾಸ್ತ್ರ ಮತ್ತು ರಾಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳ ಸರಾಸರಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಸರಾಸರಿ ಅಂಕಗಳ ಜೊತೆಗೆ ಪ್ರತಿ ವಿಷಯದಲ್ಲಿಯು ಅಭ್ಯರ್ಥಿಯು ಪಡೆದುಕೊಂಡ ಅಂಕಗಳನ್ನೂ ಪರಿಗಣಿಸಲಾಗುತ್ತದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1.80 ಲಕ್ಷ;ಪತ್ರಿಕೆ 1 ಮತ್ತು 2 ಪರೀಕ್ಷೆಗಳಿಗೆ ಹಾಜರಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆ
54,378; ಅಹರ್ತೆ ಪಡೆದುಕೊಂಡ ಒಟ್ಟು ಅಭ್ಯರ್ಥಿಗಳ ಸಂಖ್ಯೆ
9,404; ಮಹಿಳಾ ಅಭ್ಯರ್ಥಿಗಳ ಸಂಖ್ಯೆ
44,974;ಪುರುಷ ಅಭ್ಯರ್ಥಿಗಳ ಸಂಖ್ಯೆ
116; ವಿದೇಶಿ ಅಭ್ಯರ್ಥಿಗಳ ಸಂಖ್ಯೆ
13; ಅಹರ್ತೆ ಪಡೆದುಕೊಂಡವರ ಸಂಖ್ಯೆ
ಅಹರ್ತೆ ಪಡೆದುಕೊಂಡ 100 ಅಭ್ಯರ್ಥಿಗಳ ಪೈಕಿ, 31 ಅಭ್ಯರ್ಥಿಗಳ ಬಾಂಬೆ ಮತ್ತು ದೆಹಲಿ ವಲಯದವರು. 23 ಹೈದರಾಬಾದ್ ವಲಯದವರು, 4 ಕಾನ್ಪುರ ವಲಯದವರು, 5 ಖರಗಪುರ ವಲಯ ಮತ್ತು 6 ರೂರ್ಕಿ ವಲಯದವರು
'ಎನ್‌ಸಿಇಆರ್‌ಟಿ ಪಠ್ಯಗಳಿಗೆ ಹೆಚ್ಚು ಒತ್ತು ನೀಡಿದೆ'
ರಜಿತ್ ಗುಪ್ತಾ, ಮೊದಲ ರ್‍ಯಾಂಕ್ ಪಡೆದ ಅಭ್ಯರ್ಥಿಇದು ನನಗೆ ಸಂತೋಷದ ಗಳಿಗೆ. ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. 10ನೇ ತರಗತಿಯಿಂದಲೇ ನಾನು ಜೆಇಇ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ತಯಾರಿಯಲ್ಲಿ ಅಂಥ ವಿಶೇಷವೇನೂ ಇರಲಿಲ್ಲ. ನನ್ನ ಮುಖ್ಯ ಗುರಿ ಪಠ್ಯವನ್ನು ಸರಿಯಾದ ಸಮಯಕ್ಕೆ ಓದಿ ಮುಗಿಸುವುದು. ಎಚ್.ಸಿ. ವರ್ಮಾ ಮತ್ತು ಇರೋಡೋವ್ ಪುಸ್ತಕಗಳಲ್ಲಿನ ಮಾದರಿ ಪ್ರಶ್ನೆಗಳನ್ನು ಬಿಡಿಸುತ್ತಿದ್ದೆ. ಇದು ನನ್ನ ಅನುಕೂಲಕ್ಕೆ ಬಂದಿತು. ಆದರೆ, ಎನ್‌ಸಿಇಆರ್‌ಟಿ ಪಠ್ಯಗಳಿಗೆ ಹೆಚ್ಚು ಒತ್ತು ನೀಡಿದೆ.




