ಇಸ್ಲಾಮಾಬಾದ್: ಭಾರತದೊಂದಿಗೆ ಬಾಕಿ ಇರುವ ಎಲ್ಲಾ ವಿವಾದಗಳನ್ನು ಅರ್ಥಪೂರ್ಣ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಸಿದ್ಧ ಇರುವುದಾಗಿ ಪಾಕಿಸ್ತಾನದ ಪ್ರಧಾನಿ ಶಹಾಬಾಜ್ ಶರೀಫ್ ಬುಧವಾರ ಹೇಳಿದ್ದಾರೆ.
ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂವಾದದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮುಗ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರ ರೂಪದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಇದಾಗಿ ಎರಡು ತಿಂಗಳ ಬಳಕ ಇದೇ ವಿಷಯವಾಗಿ ಪಾಕಿಸ್ತಾನ ಪ್ರಧಾನಿ ಸೌದಿ ದೊರೆಯೊಂದಿಗೆ ಚರ್ಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ನೀರು ಹಂಚಿಕೆ, ವ್ಯಾಪಾರ ಮತ್ತು ಭಯೋತ್ಪಾದನೆ ಕುರಿತು ಭಾರತದೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿರುವುದಾಗಿ ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನೂ ಭಾರತ ಕಡಿದುಕೊಂಡಿತು. ಇದರಲ್ಲಿ ಸಿಂಧೂ ನದಿ ಒಪ್ಪಂದ, ವ್ಯಾಪಾರ ಸ್ಥಗಿತವೂ ಒಳಗೊಂಡಿತ್ತು. ಇದಾದ ಬೆನ್ನಲ್ಲೇ ಮೇ 7ರಂದು ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಆರಂಭಿಸಿತು. ನಾಲ್ಕು ದಿನಗಳ ಭೀಕರ ಕಾಳಗದ ನಂತರ ಮೇ 10ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು.
ದೂರವಾಣಿ ಸಂಭಾಷಣೆಯಲ್ಲಿ ಸೌದಿ ನೆರವಿಗಾಗಿ ಪಾಕ್ ಪ್ರಧಾನಿ ಶರೀಫ್ ಅವರು ಅಲ್ಲಿನ ದೊರೆಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ತಿಂಗಳು ಶರೀಫ್ ಅವರು ಇರಾನ್ ಮತ್ತು ಅಜರ್‌ಬೈಜಾನ್ ಜೊತೆ ಮಾತುಕತೆ ನಡೆಸಿದ್ದರು. ಅಲ್ಲಿಯೂ ಭಾರತದೊಂದಿಗೆ ಶಾಂತಿ ಮಾತುಕತೆಗೆ ತಾವು ಸಿದ್ಧ ಎಂದು ಹೇಳಿದ್ದರು.
ಆದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿಸುವ ಮತ್ತು ಭಯೋತ್ಪಾದನೆ ಕುರಿತು ಮಾತ್ರ ಚರ್ಚಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ ಜೈಸ್ವಾಲ್ ಅವರು ಈ ಕುರಿತು ಮಾಹಿತಿ ನೀಡಿ, 'ಗಡಿಯಾಚೆಯ ಭಯೋತ್ಪಾದನೆಯನ್ನು ಪಾಕಿಸ್ತಾನವು ನಿಜವಾಗಿಯೂ ಕೈಬಿಟ್ಟರೆ ಮಾತ್ರ ಸಿಂಧೂ ನದಿ ಒಪ್ಪಂದ ಮರುಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ, ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಜತೆಯಾಗಿ ಹೋಗಲು ಸಾಧ್ಯವಿಲ್ಲ. ಹಾಗೆಯೇ ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟೊಟ್ಟಿಗೆ ಸಾಗದು, ನೀರು ಮತ್ತು ರಕ್ತ ಜತೆಗೂಡಿ ಹರಿಯದು' ಎಂದಿದ್ದರು.




