ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವೈಷ್ಣೋ ದೇವಿ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಸೋಮವಾರ ಸಂಭವಿಸದ ಅವಘಡದಲ್ಲಿ 5 ಯಾತ್ರಿಕರು ಸೇರಿದಂತೆ ಕನಿಷ್ಠ 10ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೂಲ ಶಿಬಿರವಾದ ಕತ್ರಾ ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಅದರ ಭಾರಕ್ಕೆ ಬುಕಿಂಗ್ ಕಚೇರಿ ಮತ್ತು ಮೇಲಿನ ಕಬ್ಬಿಣದ ರಚನೆ ಕುಸಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಭೂಕುಸಿತದಿಂದಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಏಳು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದಿದ್ದಾರೆ.
ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಲಾಗಿದ್ದು, ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ತೆರವು ಕಾರ್ಯಾಚರಣೆ ಜರುಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಧ್ಯಾಹ್ನ 1ಗಂಟೆಯವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.




