ಮುಂಬೈ: 180ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿದ್ದ 2006ರ ಮುಂಬೈ ರೈಲು ಸರಣಿ ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲಲವಾಗಿದ್ದು, ಅವರು ತಪ್ಪೆಸಗಿದ್ದಾರೆ ಎಂದು ನಂಬಲು ಕಷ್ಟವಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಪ್ರಕರಣದ ತನಿಖೆ ಮಾಡಿದ್ದ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ ಈ ತೀರ್ಪಿನಿಂದ ಭಾರಿ ಮುಖಭಂಗವಾಗಿದೆ.
'ಕೃತ್ಯ ಎಸಗಲು ಬಳಸಲಾದ ಬಾಂಬ್ ಯಾವುದು ಎನ್ನುವುದನ್ನೂ ದಾಖಲಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಿಗಳನ್ನು ಶಿಕ್ಷಿಸಲು ಅದರ ಮೇಲೆ ಅವಲಂಬಿತವಾದ ಪುರಾವೆಗಳು ನಿರ್ಣಾಯಕವಾಗಿಲ್ಲ' ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕಿಲೊರ್ ಹಾಗೂ ಶ್ಯಾಮ್ ಚಂದ್ರಕ್ ಅವರಿದ್ದ ವಿಶೇಷ ನ್ಯಾಯಪೀಠ ನುಡಿಯಿತು.
'ಸಾಕ್ಷಿಗಳ ಹೇಳಿಕೆ ಹಾಗೂ ಆಪಾದಿತರಿಂದ ವಶಪಡಿಸಿಕೊಳ್ಳಲಾದ ವಸ್ತುಗಳಿಗೆ ಯಾವುದೇ ಸಾಕ್ಷ್ಯ ಮೌಲ್ಯವಿಲ್ಲ' ಎಂದು ಪ್ರಕರಣದಲ್ಲಿ ದೋಷಿಗಳಾಗಿದ್ದವರ ಖುಲಾಸೆ ವೇಳೆ ಕೋರ್ಟ್ ಹೇಳಿದೆ.
ಖುಲಾಸೆಗೊಂಡ 12 ಮಂದಿ ಪೈಕಿ ವಿಶೇಷ ನ್ಯಾಯಾಲಯವು 5 ಮಂದಿಗೆ ಗಲ್ಲು ಶಿಕ್ಷೆ ಹಾಗೂ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2015ರಲ್ಲಿ ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಮಾನ್ಯ ಮಾಡಲು ಕೋರ್ಟ್ ನಿರಾಕರಿಸಿತು. ಅಲ್ಲದೆ ಬೇರೆ ಯಾವುದೇ ಪ್ರಕರಣಗಳಲ್ಲಿ ಅವರು ಇಲ್ಲದಿದ್ದರೆ ತಕ್ಷಣವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದೂ ನಿರ್ದೇಶಿಸಿತು.
2006ರ ಜುಲೈ 11ರಂದು ಮುಂಬೈನ ಉಪನಗರ ರೈಲಿನ ಹಲವು ಭಾಗಗಳಲ್ಲಿ ಬಾಂಬ್ ಸ್ಫೋಟ ನಡೆದಿತ್ತು. 180ಕ್ಕೂ ಅಧಿಕ ಮಂದಿ ಸಾವಿಗೀಡಾಗಿ, ನೂರಾರು ಮಂದಿ ಗಾಯಗೊಂಡಿದ್ದರು.
ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ವಶಪಡಿಸಿಕೊಂಡ ವಸ್ತುಗಳ - ಸ್ಫೋಟಕಗಳು ಮತ್ತು ಸರ್ಕ್ಯೂಟ್ ಬಾಕ್ಸ್‌ಗಳನ್ನು ಕಳಪೆಯಾಗಿ ನಿರ್ವಹಣೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಕೆಲವು ಆರೋಪಿಗಳ ತಪ್ಪೊಪ್ಪಿಗೆಯು ಅವರಿಗೆ ಹಿಂಸೆ ನೀಡಿ ಹೇಳಿಸಿದಂತಿದೆ ಎಂದು ನ್ಯಾಯಪೀಠ ಹೇಳಿದೆ.
'ಆರೋಪಿಗಳ ತಪ್ಪೊಪ್ಪಿಗೆ ವಿವರಣೆ ಅಪೂರ್ಣವಾಗಿದ್ದು, ಕೆಲವು ಭಾಗಗಳು ಕಾಪಿ-ಪೇಸ್ಟ್ ಮಾಡಿದಂತಿದೆ. ತಮ್ಮ ಮೇಲೆ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದನ್ನು ಆರೋಪಿಗಳು ಸಾಬೀತು ಪಡಿಸಿದ್ದಾರೆ' ಎಂದು ಕೋರ್ಟ್ ಉಲ್ಲೇಖಿಸಿದೆ.
ಆರೋಪಿಯನ್ನು ಚರ್ಚ್‌ಗೇಟ್ ನಿಲ್ದಾಣಕ್ಕೆ ಕರೆದೊಯ್ದಿದ್ದ ಟಾಕ್ಸಿ ಚಾಲಕ, ಆರೋಪಿಗಳು ಬಾಂಬ್ ಇಡುವುದನ್ನು ನೋಡಿದ, ಬಾಂಬ್‌ಗಳನ್ನು ಒಗ್ಗೂಡಿಸಿದನ್ನು ನೋಡಿದ್ದಾರೆ ಎಂದು ಹೇಳಿದ್ದ ವ್ಯಕ್ತಿಗಳ ಸಾಕ್ಷ್ಯವನ್ನೂ ಕೋರ್ಟ್ ತಿರಸ್ಕರಿಸಿದೆ.
ಆರೋಪಿಗಳನ್ನು ಪ್ರಕರಣದಲ್ಲಿ ದೋಷಿಗಳನ್ನಾಗಿಸಲು ಸಾಕ್ಷಿಗಳ ಹೇಳಿಕೆ ನಂಬಲಾರ್ಹವಾಗಿಲ್ಲ. ಘಟನೆ ನಡೆದ ದಿನದಂದು ಸಾಕ್ಷಿದಾರರು ಅರೋಪಿಗಳನ್ನು ನೋಡಲು ಅವಕಾಶ ಇರಲಿಲ್ಲ. ನಂತರ ಅವರನ್ನು ಗುರುತಿಸಲೂ ಸಾಧ್ಯವಾಗಲಿಲ್ಲ ಎಂದು ಕೋರ್ಟ್ ಹೇಳಿತು.
2015 ರಲ್ಲಿ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ 12 ಜನರನ್ನು ದೋಷಿಗಳು ಎಂದು ಘೋಷಿಸಿ, ಐವರಿಗೆ ಮರಣದಂಡನೆ ಮತ್ತು ಉಳಿದ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಮೇಲ್ಮನವಿ ವಿಚಾರಣೆಗೆ ಬಾಕಿ ಇರುವಾಗಲೇ ಒಬ್ಬರು ಸಾವನ್ನಪ್ಪಿದ್ದರು.
ಮಹಾರಾಷ್ಟ್ರದಾದ್ಯಂತ ವಿವಿಧ ಜೈಲುಗಳಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ಅಪರಾಧಿಗಳು ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರ, ತಮ್ಮ ವಕೀಲರಿಗೆ ಧನ್ಯವಾದ ಅರ್ಪಿಸಿದರು.
ಕಮಲ್ ಅನ್ಸಾರಿ (ಈಗ ನಿಧನರಾಗಿದ್ದಾರೆ), ಮೊಹಮ್ಮದ್ ಫೈಸಲ್ ಅತೌರ್ ರೆಹಮಾನ್ ಶೇಖ್, ಎಹ್ತೆಶಾಮ್ ಕುತುಬುದ್ದೀನ್ ಸಿದ್ದಿಕಿ, ನವೀದ್ ಹುಸೇನ್ ಖಾನ್ ಮತ್ತು ಆಸಿಫ್ ಖಾನ್ ಮರಣದಂಡನೆ ಶಿಕ್ಷೆಗೆ ಗುರಿಯಾದವರು.
ಬಾಂಬ್‌ಗಳನ್ನು ಇರಿಸುವುದು ಮತ್ತು ಇತರ ಹಲವಾರು ಆರೋಪಗಳಲ್ಲಿ ಅವರನ್ನು ತಪ್ಪಿತಸ್ಥರೆಂದು ವಿಶೇಷ ನ್ಯಾಯಾಲಯವು ಘೋಷಿಸಿತ್ತು.
ತನ್ವೀರ್ ಅಹ್ಮದ್ ಮೊಹಮ್ಮದ್ ಇಬ್ರಾಹಿಂ ಅನ್ಸಾರಿ, ಮೊಹಮ್ಮದ್ ಮಜೀದ್ ಮೊಹಮ್ಮದ್ ಶಫಿ, ಶೇಖ್ ಮೊಹಮ್ಮದ್ ಅಲಿ ಅಲಮ್ ಶೇಖ್, ಮೊಹಮ್ಮದ್ ಸಾಜಿದ್ ಮಾರ್ಗುಬ್ ಅನ್ಸಾರಿ, ಮುಜಮ್ಮಿಲ್ ಅತೌರ್ ರೆಹಮಾನ್ ಶೇಖ್, ಸುಹೈಲ್ ಮೆಹಮ್ಮದ್ ಶೇಖ್ ಮತ್ತು ಜಮೀರ್ ಅಹ್ಮದ್ ಲತಿಯುರ್ ರೆಹಮಾನ್ ಶೇಖ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆರೋಪಿಗಳಲ್ಲಿ ಒಬ್ಬರಾದ ವಾಹಿದ್ ಶೇಖ್‌ರನ್ನು 2015 ರಲ್ಲಿ ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸಿತ್ತು.




