ನವದೆಹಲಿ: ಗೃಹಸಾಲ ಪಡೆಯಬೇಕೆನ್ನುವವರು ಗಮನಿಸಬೇಕಾದ ಸುದ್ದಿ. ಸಾಲವನ್ನು ಅವಧಿಗಿಂತ ಮುನ್ನ ತೀರಿಸಲು ನೀವು ಹೆಚ್ಚುವರಿ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಮುಂದಿನ ವರ್ಷದಿಂದ ಫ್ಲೋಟಿಂಗ್ ರೇಟ್ನಲ್ಲಿ (floating rate) ಪಡೆದ ಸಾಲಗಳಿಗೆ ಪ್ರೀಪೇಮೆಂಟ್ ಶುಲ್ಕ (Prepayment charge) ವಿಧಿಸುವಂತಿಲ್ಲ.
ಹೀಗೆಂದು ಆರ್ಬಿಐ ನಿಯಮ ಮಾಡಿದೆ. 2026ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ. 2026ರ ಜನವರಿ 1 ಹಾಗೂ ನಂತರ ಪಡೆಯುವ ಸಾಲ ಹಾಗೂ ರಿನಿವಲ್ಗೆ ಈ ಪ್ರೀಪೇಮೆಂಟ್ ಶುಲ್ಕ ವಿನಾಯಿತಿ ಇರಲಿದೆ.
ಫ್ಲೋಟಿಂಗ್ ಇಂಟರೆಸ್ಟ್ ರೇಟ್ನಲ್ಲಿ ಪಡೆದ ಗೃಹಸಾಲ ಹಾಗೂ ಇತರ ಸಾಲಗಳಿಗೆ ಇದು ಅನ್ವಯ ಆಗುತ್ತದೆ. ಎಲ್ಲಾ ಬ್ಯಾಂಕು, ಎನ್ಬಿಐಎಫ್ಸಿ ಇತ್ಯಾದಿ ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ಹೊಸ ನಿಯಮದ ಬಗ್ಗೆ ಸೂಚನೆ ನೀಡಿದೆ. ಬ್ಯುಸಿನೆಸ್ ಲೋನ್ಗಳಿಗೆ ಇದು ಅನ್ವಯ ಆಗುವುದಿಲ್ಲ.
ಏನಿದು ಫ್ಲೋಟಿಂಗ್ ರೇಟ್ ಲೋನ್?
ಫ್ಲೋಟಿಂಗ್ ರೇಟ್ ಲೋನ್ ಎಂದರೆ, ಬ್ಯಾಂಕ್ ನೀಡುವ ಸಾಲಕ್ಕೆ ಬಡ್ಡಿದರವು ಬಾಹ್ಯ ಪ್ರಭಾವದಿಂದ ಬದಲಾಗುವ ಅವಕಾಶ ಇರುತ್ತದೆ. ಆರ್ಬೀಐನ ರೆಪೋ ಇತ್ಯಾದಿ ಬೆಂಚ್ ಮಾರ್ಕ್ ರೇಟ್ ಬದಲಾದಾಗ ಬ್ಯಾಂಕುಗಳು ಸಾಲದ ದರಗಳನ್ನು ಬದಲಿಸುತ್ತವೆ. ಫಿಕ್ಸೆಡ್ ರೇಟ್ ಲೋನ್ನಲ್ಲಿ ಇದು ಇರುವುದಿಲ್ಲ. ಒಮ್ಮೆ ಬಡ್ಡಿ ಫಿಕ್ಸ್ ಆದರೆ ಸಾಲ ತೀರುವವರೆಗೂ ಅದೇ ಬಡ್ಡಿದರ ಇರುತ್ತದೆ.
ಏನಿದು ಪ್ರೀಪೇಮೆಂಟ್ ಚಾರ್ಜ್?
ಬ್ಯಾಂಕುಗಳಿಗೆ ನಿಮ್ಮ ಸಾಲವೇ ಪ್ರಮುಖ ಆದಾಯ ಮೂಲ. ಹೀಗಾಗಿ, ನೀವು ಸಾಲ ಪಡೆದಾಗ ಸಾಧ್ಯವಾದಷ್ಟೂ ಹೆಚ್ಚು ಕಾಲ ಬಡ್ಡಿಯನ್ನು ಅನುಭವಿಸಲು ಯತ್ನಿಸುತ್ತವೆ. ನೀವು ಬೇಗನೇ ಸಾಲ ತೀರಿಸಲು ಹೋದಾಗ ಪ್ರೀಪೇಮೆಂಟ್ ಚಾರ್ಜ್ ಹಾಕುತ್ತದೆ. ಸಂಭಾವ್ಯ ಬಡ್ಡಿ ಆದಾಯದ ನಷ್ಟವನ್ನು ಭರಿಸಲು ಬ್ಯಾಂಕು ಹಾಕುವ ಶುಲ್ಕ ಇದು. ಸಾಮಾನ್ಯವಾಗಿ, ನೀವು ಎಷ್ಟು ಹಣವನ್ನು ಮುಂಗಡವಾಗಿ ಪಾವತಿಸುತ್ತೀರೋ ಆ ಮೊತ್ತಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.
ಈಗ ಫ್ಲೋಟಿಂಗ್ ಇಂಟರೆಸ್ಟ್ ರೇಟ್ನಲ್ಲಿ ಪಡೆದುಕೊಂಡ ಸಾಲಕ್ಕೆ ಪ್ರೀಪೇಮೆಂಟ್ ಚಾರ್ಜ್ನಿಂದ ವಿನಾಯಿತಿ ಕೊಡಲು ಆರ್ಬಿಐ ನಿರ್ಧರಿಸಿದೆ. ಉಳಿದ ಸಾಲಗಳಿಗೆ ಯಥಾಪ್ರಕಾರ ಪ್ರೀಪೇಮೆಂಟ್ ಚಾರ್ಜ್ ಇರುತ್ತದೆ.




