ಲಕ್ಷಾಂತರ ಸಕ್ರಿಯ ಬಳಕೆದಾರರಿಗೆ ನಿರಂತರವಾಗಿ ಹೊಸ ವೈಶಿಷ್ಟ್ಯಗಳು ಮತ್ತು ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವಲ್ಲಿ ಹೆಸರುವಾಸಿಯಾದ WhatsApp ತನ್ನ ಬಳಕೆದಾರರಿಗೆ ಮತ್ತಷ್ಟು ಗೌಪ್ಯತೆಯನ್ನು ನೀಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಡುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ವಾಟ್ಸಾಪ್ ಹೊಸ ಗೌಪ್ಯತೆಯ ವೈಶಿಷ್ಟ್ಯದಲ್ಲಿ ಕೆಲಸ ಮಾಡುತ್ತಿದ್ದು, ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದೆ ಪರಸ್ಪರ ಸಂದೇಶ ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ. ಆಗಾಗ್ಗೆ ಗುಂಪು ಚಾಟ್‌ಗಳಿಗೆ ಸೇರುವ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ಸಂವಹನ ನಡೆಸುವ, ಆದರೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿಡಲು ಬಯಸುವ ಬಳಕೆದಾರರಿಗೆ ಇದು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಇತ್ತೀಚಿನ ವಾಬೆಟಾಇನ್ಫೋ (WABetaInfo) ವರದಿಯ ಪ್ರಕಾರ, WhatsApp ಶೀಘ್ರದಲ್ಲೇ "ಬಳಕೆದಾರ ಹೆಸರುಗಳು" (Usernames) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದೆಯೇ ಪರಸ್ಪರ ಸಂದೇಶ ಕಳುಹಿಸಲು ಅವಕಾಶ ನೀಡುವ ಮೂಲಕ ಸಂವಹನದ ವಿಧಾನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯವು ವಿಶೇಷವಾಗಿ ಆಗಾಗ್ಗೆ ಗುಂಪು ಚಾಟ್‌ಗಳಿಗೆ ಸೇರುವ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ಸಂವಹನ ನಡೆಸುವ ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇದು Telegram ಅಥವಾ Instagram ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಲಭ್ಯವಿರುವ ವೈಶಿಷ್ಟ್ಯಕ್ಕೆ ಹೋಲುತ್ತದೆ ಎಂದು ಹೇಳಲಾಗಿದೆ
WhatsApp ಪರಿಚಯಿಸುತ್ತಿರುವ ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಅ ಬಳಕೆದಾರರು ತಮ್ಮದೇ ಆದ ವಿಶಿಷ್ಟ ಬಳಕೆದಾರಹೆಸರುಗಳನ್ನು ರಚಿಸಬಹುದು. ಈ ಬಳಕೆದಾರ ಹೆಸರುಗಳ ಮೂಲಕ ಇತರರು ಅವರನ್ನು ಸಂಪರ್ಕಿಸಬಹುದು, ಇದರಿಂದಾಗಿ ಬಳಕೆದಾರರು ವೈಯಕ್ತಿಕ ಫೋನ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ. WhatsApp ಈ ವೈಶಿಷ್ಟ್ಯದೊಂದಿಗೆ ತನ್ನ ಬಳಕೆದಾರರಿಗೆ ಹೆಚ್ಚಿನ ಅನಾಮಧೇಯತೆ ಮತ್ತು ಗೌಪ್ಯತೆಯನ್ನು ಒದಗಿಸಲು ಆಶಿಸುತ್ತಿದೆ ಎನ್ನಲಾಗಿದೆ. ಇನ್ನು ಈ ವರದಿಯ ಪ್ರಕಾರ, WhatsApp ಬಳಕೆದಾರರು ತಮ್ಮ ಬಳಕೆದಾರಹೆಸರುಗಳನ್ನು ಕೆಲವು ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಹೊಂದಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಅಂದರೆ, ಹೊಸ ಯೂಸರ್ ನೇಮ್ ಅನ್ನು ರಚಿಸಿಕೊಳ್ಳಲು ಕೆಲವು ನಿಯಮಗಳನ್ನು ಸಹ ತರಲಾಗುತ್ತಿದೆ.
ಈ ನಿಯಮಗಳಲ್ಲಿ, ಬಳಕೆದಾರ ಹೆಸರು ಕನಿಷ್ಠ ಒಂದು ಅಕ್ಷರವನ್ನು ಹೊಂದಿರಬೇಕು ಮತ್ತು "www" ನೊಂದಿಗೆ ಪ್ರಾರಂಭವಾಗಬಾರದು. ಅಲ್ಲದೆ, ಸಣ್ಣ ಅಕ್ಷರಗಳು, ಸಂಖ್ಯೆಗಳು, ಅಂಡರ್‌ಸ್ಕೋರ್‌ಗಳು ಮತ್ತು ಪೂರ್ಣವಿರಾಮಗಳನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಮೆಟಾ-ಮಾಲೀಕತ್ವದ ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್, ಬಳಕೆದಾರಹೆಸರು ಲಭ್ಯತೆ ಪರೀಕ್ಷಕವನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಇದನ್ನು WhatsApp ವೆಬ್‌ನಲ್ಲಿ ಮೊದಲು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಳಕೆದಾರರು ತಮ್ಮದೇ ಆದ ವಿಶಿಷ್ಟ ಬಳಕೆದಾರಹೆಸರನ್ನು ರಚಿಸಿದಾಗ, ಅವರಿಗೆ ಅದನ್ನು ಬಳಸುವ ಆಯ್ಕೆಯನ್ನು ನೀಡಲಾಗುವುದು. ಗಮನಾರ್ಹವಾಗಿ, ಬಳಕೆದಾರಹೆಸರನ್ನು ಬದಲಾಯಿಸಿದರೆ ನಿಮ್ಮ ಸಂಪರ್ಕಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ವರದಿಯಾಗಿದೆ.

WhatsApp ಸಂಸ್ಥೆ ಈ ವೈಶಿಷ್ಟ್ಯದ ಬಿಡುಗಡೆಗೆ ಯಾವುದೇ ದೃಢಪಡಿಸಿದ ದಿನಾಂಕವಿಲ್ಲದಿದ್ದರೂ, ವರದಿಯ ಪ್ರಕಾರ, ಈ ಅಪ್‌ಡೇಟ್ ಪ್ರಸ್ತುತ ಪರೀಕ್ಷೆಯ ಅಂತಿಮ ಹಂತದಲ್ಲಿದೆ ಮತ್ತು ಮುಂಬರುವ ವಾರಗಳಲ್ಲಿ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಹೊಸ ಸಂಪರ್ಕಗಳಿಗೆ ಬಳಕೆದಾರಹೆಸರುಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆಯೇ ಹೊರತು ಫೋನ್ ಸಂಖ್ಯೆಗಳನ್ನು ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಹೊಸ ವೈಶಿಷ್ಟ್ಯವು WhatsApp ಬಳಕೆದಾರರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತಷ್ಟು ಅವಕಾಶಗಳನ್ನು ಕಲ್ಪಿಸಬಹುದು ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.





