HEALTH TIPS

ಬಾಹ್ಯಾಕಾಶ ಕ್ಷೇತ್ರದಲ್ಲಿ 200ಕ್ಕೂ ಅಧಿಕ ನವೋದ್ಯಮಗಳ ಆರಂಭ: ಪ್ರಧಾನಿ ಮೋದಿ

ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಹಿಂತಿರುಗಿ ಬಂದಿರುವುದನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, 'ದೇಶದಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶ ಕುರಿತಂತೆ ಕುತೂಹಲ ಹೆಚ್ಚಿಸಿದೆ. ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಅಧಿಕ ನವೋದ್ಯಮಗಳು ಆರಂಭಗೊಳ್ಳುತ್ತಿವೆ' ಎಂದು ತಿಳಿಸಿದರು.

124ನೇ 'ಮನದ ಮಾತು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ವಿಕಸಿತ ಭಾರತವು ಸ್ವಾವಲಂಬನೆಯ ಮೂಲಕ ಹಾದು ಹೋಗುತ್ತದೆ. ಆತ್ಮನಿರ್ಭರ ಭಾರತಕ್ಕೆ 'ವೋಕಲ್‌ ಫಾರ್ ಲೋಕಲ್‌' (ದೇಸಿ ಅಭಿವೃದ್ಧಿಗೆ ಉತ್ತೇಜನ) ಅತ್ಯಂತ ಬಲವಾದ ಅಡಿಪಾಯವಾಗಿದೆ' ಎಂದು ತಿಳಿಸಿದರು.

'ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಜನರು ಸಂತಸ ವ್ಯಕ್ತಪಡಿಸಿದರು. ಪ್ರತಿ ಹೃದಯದಲ್ಲಿಯೂ ಸಂತಸದ ಅಲೆ ಹರಿಯಿತು. ಇಡೀ ದೇಶವೇ ಹೆಮ್ಮೆಯಿಂದ ಕೊಂಡಾಡಿತು' ಎಂದು ಮೋದಿ ಹೇಳಿದರು.

ವೇಗವಾಗಿ ನವೋದ್ಯಮ: 'ಐದು ವರ್ಷಗಳ ಹಿಂದೆ 50 ನವೋದ್ಯಮಗಳು ದೇಶದಲ್ಲಿ ಇದ್ದವು. ಈಗ ಬಾಹ್ಯಾಕಾಶ ಕ್ಷೇತ್ರವೊಂದರಲ್ಲಿಯೇ 200ಕ್ಕೂ ಅಧಿಕ ನವೋದ್ಯಮಗಳು ಆರಂಭಗೊಂಡಿವೆ. ಇದೇ ಆಗಸ್ಟ್‌ 23ರಂದು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ನಡೆಯಲಿದ್ದು, ಕಾರ್ಯಕ್ರಮದ ಸ್ವರೂಪದ ಕುರಿತು ಸಲಹೆಗಳನ್ನು ನೀಡಬಹುದು' ಎಂದು ಕರೆ ನೀಡಿದರು.

'2023ರಲ್ಲಿ ಚಂದ್ರಯಾನ-3 ಯಶಸ್ವಿಯಾದ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಮಕ್ಕಳಲ್ಲಿಯೂ ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಕುರಿತಂತೆ ಆಸಕ್ತಿ ಸೃಷ್ಟಿಯಾಗಿದೆ. ಸಣ್ಣ ಮಕ್ಕಳು ಕೂಡ ಚಂದ್ರನಲ್ಲಿ ಇಳಿಯುವುದಾಗಿ, ಬಾಹ್ಯಾಕಾಶ ವಿಜ್ಞಾನಿಯಾಗುವುದಾಗಿ ಹೇಳುತ್ತಿದ್ದಾರೆ' ಎಂದು ನೆನಪಿಸಿಕೊಂಡರು.

ಮಕ್ಕಳಲ್ಲಿ ಹೊಸತನ ಉತ್ತೇಜಿಸುವ ಅಭಿಯಾನದ ಅಂಗವಾಗಿ 'ಇನ್ಸ್ಫೈರ್‌-ಮಾನಕ್‌' ಆರಂಭಿಸಲಾಗಿದ್ದು, ಪ್ರತಿ ಶಾಲೆಯಿಂದಲೂ ಐದು ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದುವರೆಗೂ ಲಕ್ಷಾಂತರ ಮಕ್ಕಳು ಅಭಿಯಾನದಡಿಯಲ್ಲಿ ಸೇರ್ಪಡೆಯಾಗಿದ್ದು, ಚಂದ್ರಯಾನ-3 ಯಶಸ್ವಿ ಬಳಿಕ ಈ ಸಂಖ್ಯೆಯೂ ದ್ವಿಗುಣಗೊಂಡಿದೆ' ಎಂದು ಮೋದಿ ಮಾಹಿತಿ ನೀಡಿದರು.

ಮುಂದಿನ ತಿಂಗಳು ಮುಂಬೈನಲ್ಲಿ ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ ಕುರಿತಾದ ಒಲಿಂಪಿಯಾಡ್‌ ಸ್ಪರ್ಧೆ ನಡೆಯಲಿದ್ದು, ಇದು ದೇಶದಲ್ಲಿ ಇದುವರೆಗೂ ನಡೆದ ಅತಿ ದೊಡ್ಡ ಒಲಿಂಪಿಯಾಡ್‌ ಆಗಿದೆ' ಎಂದು ಮೋದಿ ಹೇಳಿದರು.

ಪ್ರಮುಖಾಂಶಗಳು:

*ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ 12 ಮರಾಠಿ ಕೋಟೆಗಳ ಸೇರ್ಪಡೆಯಾಗಿರುವುದು ದೇಶಕ್ಕೆ ಹೆಮ್ಮೆಯ ವಿಚಾರ

*ಖಂಡೇರಿ ಕೋಟೆಯು ಸಮುದ್ರದ ಮಧ್ಯಭಾಗದಲ್ಲಿ ನಿರ್ಮಿಸಿದ ಅದ್ಭುತ ಕೋಟೆಯಾಗಿದೆ

* ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬುಡಕಟ್ಟು ಮಹಿಳೆಯರು ಸಂಥಾಲಿ ಸೀರೆ ಉತ್ಪಾದನೆಗೆ ಮರುಜೀವ ನೀಡಿರುವುದು ಶ್ಲಾಘನೀಯ

*ಜಾರ್ಖಂಡ್‌ನ ಗುಮ್ಲಾದಲ್ಲಿ ಮಾಜಿ ನಕ್ಸಲರಿಂದ ಮೀನುಗಾರಿಕೆ ಕೃಷಿ

*ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಸ್ವಾವಲಂಬನೆಯ ಬದುಕು

ಗೋವಾ ತ್ಯಾಜ್ಯ ನಿರ್ವಹಣೆ ಉಲ್ಲೇಖ: ಸಾವಂತ್‌ ಧನ್ಯವಾದ

ಪಣಜಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ತ್ಯಾಜ್ಯದ ಸಮರ್ಪಕ ನಿರ್ವಹಣೆ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಈ ವೇಳೆ ಪ್ರಶಂಸಿಸಿದರು. ರಾಜ್ಯದ ಕೆಲಸ ಮೆಚ್ಚಿ ಉಲ್ಲೇಖಿಸಿದ್ದಕ್ಕೆ ಗೋವಾ ಮುಖ್ಯಮಂತ್ರಿ ಪ್ರವೋದ್‌ ಸಾವಂತ್‌ ಅವರು ಧನ್ಯವಾದ ಸಲ್ಲಿಸಿದ್ದಾರೆ. 'ಪಣಜಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ 16 ವಿವಿಧ ಭಾಗಗಳಲ್ಲಿ ತ್ಯಾಜ್ಯ ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರಪತಿಗಳ ಪುರಸ್ಕಾರವು ದೊರೆತಿದೆ. ಸ್ವಚ್ಛತೆಯು ಒಂದು ಸಲ ಒಂದು ದಿನಕ್ಕೆ ಸೀಮಿತವಾಗಿಲ್ಲ. ಸ್ವಚ್ಛತೆಯನ್ನು ಪ್ರತಿ ನಿತ್ಯವೂ ಮುಂದುವರಿಸಿದರೆ ಇಡೀ ದೇಶವೇ ಸ್ವಚ್ಛವಾಗಿರಲಿದೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries