ನವದೆಹಲಿ: ಸೇನಾ ಕಾರ್ಯಾಚರಣೆ ವೇಳೆ ಕೈಕಾಲುಗಳನ್ನು ಕಳೆದುಕೊಂಡ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಸಿಎಪಿಎಫ್‌ನ ಅಧಿಕಾರಿಗಳು ಮತ್ತು ಯೋಧರು ಅವರ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಭಾನುವಾರ ತಿಳಿಸಿದ್ದಾರೆ.
ಒಂದು ಬಾರಿಯ ಮೂಲ ಆರ್ಥಿಕ ಪ್ಯಾಕೇಜ್ ಜೊತೆಗೆ ತಮ್ಮ ಬಡ್ತಿ ಮತ್ತು ವೇತನವನ್ನು ಕೂಡ ಅವರು ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 87ನೇ ಸ್ಥಾಪನಾ ದಿನಾಚರಣೆಯ ಸಂದರ್ಭದ ಇಲ್ಲಿ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಿಆರ್‌ಪಿಎಫ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಶಿಫಾರಸುಗಳು ಮತ್ತು ವಿಧಾನಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.
ಕಳೆದ ದಶಕಗಳಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಕಚ್ಚಾ ಬಾಂಬ್ ಸ್ಫೋಟದಂತಹ ಘಟನೆಗಳಿಂದಾಗಿ ಸಿಎಪಿಎಫ್‌ನ ನೂರಾರು ಸಿಬ್ಬಂದಿ ತಮ್ಮ ಕೈ-ಕಾಲುಗಳು ಅಥವಾ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.




