ಕಾಸರಗೋಡು: ಕೇರಳದ ಶಾಲಾ ವಿದ್ಯಾರ್ಥಿಗಳ ಖಾಸಗಿ ಬಸ್ ಪ್ರಯಾಣ ದರವನ್ನು ಕನಿಷ್ಟ ಐದು ರೂ. ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಕೇರಳ ರಾಜ್ಯಾದ್ಯಂತ ಜುಲೈ 22ರಿಂದ ಅನಿರ್ಧಿಷ್ಟಾವಧಿಕಾಲ ಮುಷ್ಕರ ನಡೆಸಲು ಖಾಸಗಿ ಬಸ್ ಮಾಲಿಕರ ಒಕ್ಕೂಟ ತೀರ್ಮಾನಿಸಿರುವುದಾಗಿ ಕಾಸರಗೋಡು ಜಿಲ್ಲಾ ಬಸ್‍ಮಾಲಿಕರ ಸಂಘ ಅಧ್ಯಕ್ಷ ಕೆ. ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅನಿರ್ಧಿಷ್ಟಾವಧಿಕಾಲ ಮುಷ್ಕರದ ಪೂರ್ವಭಾವಿಯಾಗಿ ಜುಲೈ 8ರಂದು ಸೂಚನಾ ಮುಷ್ಕರ ನಡೆಯಲಿದೆ. ವಿದ್ಯಾರ್ಥಿ ರಿಯಾಯಿತಿ ದರ ಹೆಚ್ಚಳ ಸಹಿತ ಬಸ್ ಮಾಲಿಕರ ಸಂಘಟನೆ ಆರು ಪ್ರಮುಖ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಬೇಡಿಕೆ ಈಡೇರುವ ವರೆಗೆ ಅನಿಶ್ಚಿತಕಾಲ ಮುಷ್ಕರ ಹಮ್ಮಿಕೊಳ್ಳಲಾಗುವುದು. ಬಸ್ ಮಾಲಿಕರ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಮನವಿ ಸಲ್ಲಿಸಿರುವುದಲ್ಲದೆ, ನಿರಾಹಾರ ಸತ್ಯಾಗ್ರಹ, ಧರಣಿ, ಪ್ರತಿಭಟನಾ ಸಂಗಮ ಸೇರಿದಂತೆ ವಿವಿಧ ಹೋರಾಟ ನಡೆಸಿದ್ದರೂ, ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗದಿರುವುದರಿಂದ ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ವಿದ್ಯಾರ್ಥಿ ಪ್ರಯಾಣದರವನ್ನು ಪ್ರಸಕ್ತ ಇರುವ ಕನಿಷ್ಠ ದರ ಒಂದು ರೂ.ನಿಂದ ಐದು ರೂ.ಗೆ ಹೆಚ್ಚಿಸಬೇಕು. ದೀರ್ಘದೂರ ಹಾಗೂ ಲಿಮಿಟೆಡ್ ಸ್ಟಾಪ್ ಬಸ್‍ಗಳ ಪರವಾನಗಿ ಸಕಾಲದಲ್ಲಿ ನವೀಕರಿಸಿ ನೀಡಬೇಕು, ಜಸ್ಟೀಸ್ ರಾಮಚಂದ್ರನ್ ಆಯೋಗದ ವರದಿ ಜಾರಿಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಕಾರ್ಯದರ್ಶಿ ಲಕ್ಷ್ಮಣನ್, ಕೇಂದ್ರ ಸಮಿತಿ ಸದಸ್ಯ ಮಹಮ್ಮದ್‍ಕುಞÂ, ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಪಿ.ಎ ಮಹಮ್ಮದ್‍ಕುಞÂ, ಪಿ. ಪದ್ಮನಾಭನ್, ಜತೆಕಾರ್ಯದರ್ಶಿಗಳಾದ ಶಂಕರ ನಾಯ್ಕ್, ಸುಕುಮಾರನ್, ಕೋಶಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.




