HEALTH TIPS

ಥಾಯ್ಲೆಂಡ್‌-ಕಾಂಬೋಡಿಯಾ ಸಂಘರ್ಷ: 33 ಜನ ಸಾವು- ಕದನ ವಿರಾಮಕ್ಕೆ ಆಸಿಯಾನ್‌ ಕರೆ

ಸುರಿನ್‌: ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಶನಿವಾರ ಮೂರನೆಯ ದಿನಕ್ಕೆ ಕಾಲಿರಿಸಿದ್ದು, ಎರಡು ದೇಶಗಳ ನಡುವಿನ ಕ್ಷಿಪಣಿ ದಾಳಿಯಲ್ಲಿ 33 ಜನರು ಮೃತಪಟ್ಟಿದ್ದಾರೆ. 1.68 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಎರಡೂ ದೇಶಗಳು ತಕ್ಷಣವೇ ಕದನ ವಿರಾಮ ಘೋಷಿಸುವಂತೆ, ಇದಕ್ಕಾಗಿ ಮಧ್ಯಪ್ರವೇಶ ಮಾಡುವಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಕ್ಕೆ (ಆಸಿಯಾನ್‌) ವಿಶ್ವಸಂಸ್ಥೆ ಕರೆ ನೀಡಿದೆ.

ಕಾಂಬೋಡಿಯಾದೊಂದಿಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನು ಥಾಯ್ಲೆಂಡ್‌ ಶನಿವಾರ ಮುಚ್ಚಿದೆ. ಥಾಯ್ಲೆಂಡ್‌ ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಕಾಂಬೋಡಿಯಾ ಹೇಳಿದೆ. ಕಾಂಬೋಡಿಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿದೆ. ಎರಡೂ ದೇಶಗಳು ದಾಳಿ ಮುಂದುವರಿಸಿರುವುದಾಗಿ ಹೇಳಿಕೊಂಡಿದ್ದು, ತಮ್ಮ ರಾಯಭಾರ ಅಧಿಕಾರಿಗಳನ್ನು ವಾಪಸ್‌ ಕರೆಯಿಸಿಕೊಂಡಿವೆ.

ಶನಿವಾರ ಗಡಿಭಾಗದಿಂದ 10,865 ಕುಟುಂಬಗಳ 37,635 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾಂಬೋಡಿಯಾದ ಮಾಹಿತಿ ಸಚಿವ ನೇತ್‌ ಪೆಕ್ಟ್ರಾ ಹೇಳಿದ್ದಾರೆ. ಗಡಿ ಭಾಗದ ಗ್ರಾಮಗಳಲ್ಲಿ 1.31 ಲಕ್ಷದಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂದು ಥಾಯ್ಲೆಂಡ್‌ ಹೇಳಿದೆ. ಸುರಕ್ಷತಾ ದೃಷ್ಟಿಯಿಂದ ಥಾಯ್ಲೆಂಡ್‌ ಸರ್ಕಾರ ಶನಿವಾರ ಗಡಿ ಭಾಗದ 852 ಶಾಲೆಗಳನ್ನು ಮತ್ತು ಏಳು ಆಸ್ಪತ್ರೆಗಳನ್ನು ಮುಚ್ಚಿದೆ.

'ಶನಿವಾರ ಥಾಯ್ಲೆಂಡ್‌ ಗಡಿ ಪ್ರದೇಶದ ಪರ್ಸಾಟ್‌ನಲ್ಲಿ ಅಪ್ರಚೋದಿತ ಕ್ಷಿಪಣಿ ದಾಳಿ ನಡೆದಿದೆ' ಎಂದು ಕಾಂಬೋಡಿಯಾದ ರಕ್ಷಣಾ ಇಲಾಖೆ ಹೇಳಿದೆ. 'ಕೊ ಕಾಂಗ್‌' ಪ್ರದೇಶದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಥಾಯ್ಲೆಂಡ್‌ ಆಕ್ರಮಣಕಾರಿ ಧೋರಣೆ ಮುಂದುವರಿಸಿದ್ದು, ಇಲ್ಲಿನ ಕರಾವಳಿ ತೀರದಲ್ಲಿ ನಾಲ್ಕು ಹಡಗುಗಳನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ' ಎಂದು ರಕ್ಷಣಾ ಸಚಿವಾಲಯದ ವಕ್ತಾರೆ ಲೆಫ್ಟಿನಂಟ್‌ ಜನರಲ್‌ ಮಲಿ ಸೊಚೆತಾ ಹೇಳಿದ್ದಾರೆ. 'ಕಾಂಬೋಡಿಯಾದ ಆಕ್ರಮಣವನ್ನು ನಾವೂ ಸಹಿಸುವುದಿಲ್ಲ' ಎಂದು ಥಾಯ್ಲೆಂಡ್‌ ಹೇಳಿದೆ.

ದಶಕಗಳಿಂದ ಸಂಘರ್ಷ: ಥಾಯ್ಲೆಂಡ್‌- ಕಾಂಬೋಡಿಯಾ ನಡುವಿನ 800 ಕಿ.ಮೀ ಗಡಿ ಪ್ರದೇಶದಲ್ಲಿ ದಶಕಗಳಿಂದ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಮೂರು ತಿಂಗಳ ಹಿಂದೆ ಕಾಂಬೋಡಿಯಾದ ಸೈನಿಕನೊಬ್ಬನ ಹತ್ಯೆಯ ನಂತರ ಇದು ಉಲ್ಬಣಗೊಂಡಿದೆ. ಸೈನಿಕನ ಹತ್ಯೆಯು ಎರಡು ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿಸಿದ್ದು, ಥಾಯ್ಲೆಂಡ್‌ನ ರಾಜಕೀಯದಲ್ಲೂ ತಲ್ಲಣ ಮೂಡಿಸಿದೆ.

ರಾಯಭಾರ ಕಚೇರಿ ಸಲಹೆ: ಈ ದೇಶಗಳಲ್ಲಿರುವ ಭಾರತೀಯರು ಗಡಿ ಭಾಗದಲ್ಲಿ ಸಂಚಾರ ಕೈಗೊಳ್ಳದಂತೆ ಭಾರತೀಯ ರಾಯಭಾರ ಇಲಾಖೆ ಸಲಹೆ ನೀಡಿದೆ. 'ಈ ದೇಶಗಳಲ್ಲಿರುವ ಭಾರತೀಯರು ತುರ್ತು ನೆರವಿಗಾಗಿ +855 92881676 ಅಥವಾ ಇಮೇಲ್‌ cons.phnompenh@mea.gov.in ಸಂಪರ್ಕಿಸಬಹುದು ಎಂದು ಭಾರತೀಯ ರಾಯಭಾರ ಕಚೇರಿ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

ಐತಿಹಾಸಿಕ ತಾಣದ ಹಕ್ಕುಸ್ಥಾಪನೆಗಾಗಿ ಸಂಘರ್ಷ ಐತಿಹಾಸಿಕ ತಾಣದ ಮೇಲಿನ ಹಕ್ಕುಸ್ಥಾಪನೆಗಾಗಿ ಥಾಯ್ಲೆಂಡ್‌- ಕಾಂಬೋಡಿಯಾ ನಡುವೆ ದಶಕಗಳಿಂದ ಸಂಘರ್ಷ ಮುಂದುವರಿದಿದೆ. ಥಾಯ್ಲೆಂಡ್‌ನಲ್ಲಿರುವ 11ನೇ ಶತಮಾನದ ಪುರಾತನ ಹಿಂದೂ ದೇವಾಲಯ ಪ್ರೀಹ್‌ ವಿಹಾರ್‌ನ ಮಾಲೀಕತ್ವ ಕಾಂಬೋಡಿಯಾಕ್ಕೆ ಸೇರಿದೆ ಎಂದು 1962ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಹೇಳಿತ್ತು. ಆದರೆ ಇದನ್ನು ಒಪ್ಪದ ಥಾಯ್ಲೆಂಡ್‌ ದೇವಸ್ಥಾನದ ಸುತ್ತಲಿನ ಭೂಮಿಯ ಹಕ್ಕಿಗಾಗಿ ಹೋರಾಟ ಮುಂದುವರಿಸಿತ್ತು. 2008ರಲ್ಲಿ ಕಾಂಬೋಡಿಯಾ 'ಪ್ರೀಹ್‌ ವಿಹಾರ್‌' ದೇವಸ್ಥಾನವನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಲು ಪ್ರಯತ್ನಿಸಿದಾಗ ಈ ಸಂಘರ್ಷ ಉಲ್ಬಣಗೊಂಡಿತ್ತು. ದೇವಸ್ಥಾನ ಮತ್ತು ಅದರ ಸುತ್ತಲಿನ ಜಾಗ ಕಾಂಬೋಡಿಯಾಕ್ಕೆ ಸೇರಿದ್ದು ಎಂದು 'ಐಸಿಜೆ' ಪುನರುಚ್ಚರಿಸಿತ್ತು. ಈ ವಿಚಾರವಾಗಿ 2011ರ ಫೆಬ್ರುವರಿಯಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಮೃತಪಟ್ಟಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries