ಕುಂಬಳೆ: ಬೃಹತ್ ಗಾತ್ರದ ಕಾಡುಕೋಣವೊಂದು ಕುಂಬಳೆ ಸನಿಹದ ಬಂಬ್ರಾಣದ ಅಂಬಿಲಡ್ಕ, ಬಾಯಿಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ. ಕಾಡುಕೋಣ ಕಂಡುಬರುತ್ತಿದ್ದಂತೆ ಸ್ಥಳೀಯರು ಒಟ್ಟುಸೇರಿ ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿನೀಡಿದರೂ, ತಮ್ಮಲ್ಲಿ ಕಾಡುಕೋಣ ಸೆರೆಹಿಡಿಯುವ ಯಾವುದೇ ವ್ಯವಸ್ಥೆಯಿಲ್ಲ ಎಂದು ತಿಳಿಸಿ, ವಾಪಸಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ.
ನಂತರ ವಿವೀಧೆಡೆ ಸಂಚರಿಸಿ ಅಡಕೆ ತೋಟದೊಳಗೆ ನುಗ್ಗಿ ಕಾಡುಕೋಣ ಅಪ್ರತ್ಯಕ್ಷಗೊಂಡಿದೆ. ನಂತರ ಸ್ಥಳೀಯ ನಿವಾಸಿಗಳು ಒಟ್ಟುಸೇರಿ ಕಾಡುಕೋಣದ ಸಂಚಾರದ ಬಗ್ಗೆ ಜಾಗ್ರತೆ ಪಾಲಿಸುವಂತೆ ಜನರಿಗೆ ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ಕಾಡುಕೋಣವೊಂದು ಇಚ್ಲಂಪಾಡಿ, ಚತ್ರಂಪಳ್ಳ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದೇ ಕಾಡುಕೋಣ ಅಂಬಿಲಡ್ಕ ಪ್ರದೇಶದಲ್ಲೂ ಕಾಣಿಸಿಕೊಂಡಿರಬೇಕೆಂದು ಸಂಶಯಿಸಲಾಗಿದೆ.
ಸೋಮವಾರ ತಡರಾತ್ರಿ ಕುಂಬಳೆ-ಮುಳ್ಳೇರಿಯ ಕೆಎಸ್‍ಟಿಪಿ ರಸ್ತೆಯ ನೀರ್ಚಾಲು ಸನಿಹದ ಕನ್ಯಪ್ಪಾಡಿಯಲ್ಲಿ ಭಾರೀ ಗಾತ್ರದ ಕಾಡುಕೋಣ ಕಂಡುಬಂದಿತ್ತು. ನಂತರ ಬೀದಿನಾಯಿಗಳು ಕಾಡುಕೋಣವನ್ನು ಹಿಮ್ಮೆಟ್ಟಿಸಿತ್ತು.



