HEALTH TIPS

ವೈದ್ಯಕೀಯ ಕಾಲೇಜುಗಳ ಭ್ರಷ್ಟಾಚಾರ: 34 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ನವದೆಹಲಿ: ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಗೋಪ್ಯ ಮತ್ತು ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಹಂಚಿಕೊಳ್ಳುವ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ವಿಶ್ವವಿದ್ಯಾಲಯದ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ, ಮಂಡ್ಯ ವೈದ್ಯಕೀಯ ಕಾಲೇಜಿನ ಒಬ್ಬ ವೈದ್ಯ ಸೇರಿ ಕರ್ನಾಟಕದ ಇಬ್ಬರು ವೈದ್ಯರನ್ನು ಒಳಗೊಂಡಂತೆ ಒಟ್ಟು 34 ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹಿರಿಯ ಅಧಿಕಾರಿಗಳು, ಮಧ್ಯವರ್ತಿಗಳು, ದೇಶದ ವಿವಿಧೆಡೆಯ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳನ್ನು ಒಳಗೊಂಡ ಈ ಜಾಲವನ್ನು ಸಿಬಿಐ ಭೇದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಕುರಿತು ಜೂನ್‌ 30ರಂದು ಎಫ್‌ಐಆರ್‌ ದಾಖಲಿಸಲಾಗಿದ್ದು, ಆರೋಗ್ಯ ಸಚಿವಾಲಯದ ಎಂಟು ಅಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯುಕ್ತರ (ಎನ್‌ಎಂಸಿ) ತಪಾಸಣಾ ತಂಡದ ಭಾಗವಾಗಿದ್ದ ಐವರು ವೈದ್ಯರನ್ನು ಹೆಸರಿಸಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮುಂಚಿತವಾಗಿಯೇ ತಪಾಸಣೆಗೆ ಸಂಬಂಧಿಸಿದ ಗೋಪ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ನೀಡಿ, ಸಮರ್ಪಕ ತಯಾರಿ ನಡೆಸಲು ಈ ಜಾಲ ಕಾಲೇಜುಗಳಿಗೆ ನೆರವಾಗುತ್ತಿತ್ತು. ಇದಕ್ಕಾಗಿ ಜಾಲದವರು ಭಾರಿ ಪ್ರಮಾಣದ ಲಂಚ ಪಡೆಯುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ಸ್‌ನ ಅಧ್ಯಕ್ಷ ಡಿ.ಪಿ.ಸಿಂಗ್‌ (2018ರಿಂದ 2021ರವರೆಗೆ ಯುಜಿಸಿ ಅಧ್ಯಕ್ಷರಾಗಿದ್ದರು), ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಮತ್ತು ಮೂಳೆತಜ್ಞ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಎನ್‌.ಮಂಜಪ್ಪ, ಬೆಂಗಳೂರಿನ ಅವರ ಆಪ್ತ ಡಾ. ಸುರೇಶ್‌, ಗೀತಾಂಜಲಿ ವಿಶ್ವವಿದ್ಯಾಲಯದ ಕುಲಸಚಿವ ಮಯೂರ್‌ ರಾವಲ್‌, ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ರವಿ ಶಂಕರ್‌ ಜಿ ಮಹಾರಾಜ್‌ ಮತ್ತು ಇಂಡೆಕ್ಸ್‌ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಸುರೇಶ್‌ ಸಿಂಗ್‌ ಭಡೋರಿಯಾ ಅವರ ಹೆಸರು ಎಫ್‌ಐಆರ್‌ನಲ್ಲಿದೆ.

ಹವಾಲಾ ಜಾಲದಿಂದ ₹ 55 ಲಕ್ಷ

ಛತ್ತೀಸಗಡದ ರಾಯಪುರದಲ್ಲಿನ ಶ್ರೀರಾವತ್‌ಪುರ ಸರ್ಕಾರ್‌ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನಿಯೋಜಿಸಲಾದ ಎನ್‌ಎಂಸಿ ತಪಾಸಣಾ ತಂಡದಲ್ಲಿ ಡಾ.ಮಂಜಪ್ಪ ಇದ್ದರು. ಈ ಸಂಸ್ಥೆಗೆ ಅನುಕೂಲಕರ ವರದಿ ನೀಡಲು ₹55 ಲಕ್ಷವನ್ನು ಹವಾಲಾ ಜಾಲದ ವ್ಯಕ್ತಿಯಿಂದ ಈ ತಂಡ ಪಡೆದಿದೆ. ಮಂಜಪ್ಪ ಅವರು ಈ ಹಣ ಪಡೆಯಲು ಬೆಂಗಳೂರಿನ ಸಹವರ್ತಿ ಡಾ. ಸತೀಶ್‌ ಅವರಿಗೆ ತಿಳಿಸಿದ್ದರು. ಅಲ್ಲದೆ ತಂಡದಲ್ಲಿದ್ದ ಮತ್ತೊಬ್ಬ ಸದಸ್ಯರಾದ ಡಾ. ಚೈತ್ರಾ ಅವರಿಗೆ ಹಣವನ್ನು ಸತೀಶ್‌ ಮೂಲಕ ತಲುಪಿಸುವುದಾಗಿಯೂ ಮಂಜಪ್ಪ ಹೇಳಿದ್ದರು. ಲಂಚದ ಈ ಹಣವನ್ನು ಬೆಂಗಳೂರಿನಲ್ಲಿ ಸಂಬಂಧಿಸಿದವರು ಪಡೆಯುತ್ತಿದ್ದಂತೆಯೇ ಮೂವರು ವೈದ್ಯರು ಸೇರಿ ಎಂಟು ಜನರನ್ನು ಬಂಧಿಸಲಾಯಿತು ಎಂದು ಸಿಬಿಐ ವಿವರಿಸಿದೆ.

ಎನ್‌ಎಂಸಿ ನಿಯೋಜಿಸಲು ಅಂತಿಮಗೊಳಿಸುತ್ತಿದ್ದ ತಪಾಸಣಾ ತಂಡದಲ್ಲಿನ ಸದಸ್ಯರ ಹೆಸರುಗಳನ್ನು ಈ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಜಾಲವು ವೈದ್ಯಕೀಯ ಸಂಸ್ಥೆಗಳಿಗೆ ನೀಡುತ್ತಿತ್ತು. ಅಲ್ಲದೆ ತಪಾಸಣಾ ವೇಳಾಪಟ್ಟಿ ಮತ್ತು ಮೌಲ್ಯಮಾಪಕರ ಗುರುತುಗಳನ್ನೂ ಈ ಸಂಸ್ಥೆಗಳ ಜತೆ ಹಂಚಿಕೊಂಡು ಹಣಗಳಿಸುತ್ತಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries