HEALTH TIPS

500 ಮುಖಬೆಲೆ ನೋಟು ರದ್ದಾಗುತ್ತಾ ? : ಕೇಂದ್ರದಿಂದ ಸ್ಪಷ್ಟನೆ

ನವದೆಹಲಿ: 'ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ' ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, 'ಯಾವುದೇ ಕಾರಣಕ್ಕೂ 500 ರು. ನೋಟು ರದ್ದತಿಯಾಗುವುದಿಲ್ಲ. ನೋಟು ಚಾಲ್ತಿಯಲ್ಲಿಯೇ ಇರಲಿದೆ' ಎಂದು ಸ್ಪಷ್ಟಪಡಿಸಿದೆ.

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧೀನದ ಪಿಐಬಿ ಫ್ಯಾಕ್ಟ್‌ ಚೆಕ್‌ ಸತ್ಯಾಸತ್ಯತೆ ಪರೀಕ್ಷೆ ನಡೆಸಿದೆ. 'ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನೋಟು ರದ್ದತಿಯ ಕುರಿತು ಹರಿದಾಡುತ್ತಿರುವ ಸಂದೇಶ ಸಂಪೂರ್ಣ ಸುಳ್ಳು. ಆರ್‌ಬಿಐ ಅಥವಾ ಕೇಂದ್ರ ಸರ್ಕಾರವಾಗಲಿ ಅಂತಹ ಯಾವುದೇ ಆದೇಶ/ ಸೂಚನೆಗಳನ್ನು ನೀಡಿಲ್ಲ. ಜನರು ಇಂತಹ ಸುಳ್ಳು ಸುದ್ದಿ ಕುರಿತು ಗಮನ ಕೊಡಬಾರದು' ಎಂದು ತಿಳಿಸಿದೆ.

5 ವರ್ಷದ ಬಳಿಕ ಸಚಿವ ಜೈಶಂಕರ್‌ ಚೀನಾ ಭೇಟಿ

ನವದೆಹಲಿ: ಭಾರತ-ಚೀನಾ ಸಂಬಂಧದಲ್ಲಿ ಕೊಂಚ ಸುಧಾರಣೆಗಳು ಕಾಣುತ್ತಿರುವ ಹೊತ್ತಿನಲ್ಲೇ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು, 5 ವರ್ಷಗಳ ಬಳಿಕ ಚೀನಾಗೆ ಭೇಟಿ ನೀಡಿದ್ದಾರೆ. ಸಿಂಗಾಪುರ ಭೇಟಿಯಲ್ಲಿದ್ದ ಅವರು, ಭಾನುವಾರ ಸಂಜೆ ಅಲ್ಲಿಂದಲೇ ಬೀಜಿಂಗ್‌ ತಲುಪಿದ್ದಾರೆ.

ಸೋಮವಾರ ಜೈಶಂಕರ್‌ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ, ಶಾಂಘೈ ಕೊ-ಆಪರೇಷನ್‌ ಆರ್ಗನೈಸೇಷನ್‌(ಎಸ್‌ಸಿಒ) ವಿದೇಶಾಂಗ ಸಚಿವರ ಸಭೆಯಲ್ಲೂ ಭಾಗವಹಿಸಲಿದ್ದಾರೆ.

2020ರ ಗಲ್ವಾನ್‌ ಸಂಘರ್ಷದ ಬಳಿಕ ಇದೇ ಮೊದಲ ಬಾರಿ ಜೈಶಂಕರ್‌ ಚೀನಾಗೆ ಭೇಟಿ ನೀಡಿದ್ದಾರೆ. ಮುಂದಿನ ತಿಂಗಳು ವಾಂಗ್‌ ಯಿ ಭಾರತಕ್ಕೆ ಬರುವ ನಿರೀಕ್ಷೆಯಿದೆ.

ಮ.ಪ್ರ.: ಲಾಡ್ಲಿ ಬೆಹ್ನಾ ಅಡಿ ₹250 ರಾಖಿ ಗಿಫ್ಟ್‌, ಮಾಸಿಕ ಭತ್ಯೆ ₹1500ಕ್ಕೆ ಏರಿಕೆ

ಉಜ್ಜಯಿನಿ: ಕರ್ನಾಟಕದ ಗೃಹಲಕ್ಷ್ಮೀ ರೀತಿ ಮಧ್ಯ ಪ್ರದೇಶದಲ್ಲಿ ಲಾಡ್ಲಿ ಬೆಹ್ನಾ ಯೋಜನೆಯಿದ್ದು, ಇದರಲ್ಲಿ ಸ್ತ್ರೀಯರಿಗೆ ರಕ್ಷಾ ಬಂಧನದ ಉಡುಗೊರೆಯಾಗಿ 250 ರು. ನೀಡಲಾಗುವುದು ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಘೋಷಿಸಿದ್ದಾರೆ. ಜೊತೆಗೆ ಈಗಾಗಲೇ ಮಹಿಳೆಯರಿಗೆ ನೀಡುತ್ತಿರುವ ಮಾಸಾಶನವನ್ನು 1250 ರು.ನಿಮದ 1500 ರು.ಗೆ ಅಕ್ಟೋಬರ್‌ನಿಂದ ಏರಿಕೆ ಮಾಡಲಾಗುವುದು ತಿಳಿಸಿದ್ದಾರೆ.

ಭಾನುವಾರ ಮಾತನಾಡಿದ ಯಾದವ್‌, 'ರಕ್ಷಾ ಬಂಧನವು ಅಣ್ಣಾ ತಂಗಿ ನಡುವಿನ ಸಂಬಂಧದ ಸಂಕೇತವಾಗಿದ್ದು, 250 ರು.ಗಳನ್ನು ರಾಖಿ ಗಿಫ್ಟ್‌ನಂತೆ ಕೊಡಲಾಗುತ್ತದೆ. ಜೊತೆಗೆ ಅಕ್ಟೋಬರ್‌ನಿಂದ ಲಾಡ್ಲಿ ಬೆಹ್ನಾ ಅಡಿಯಲ್ಲಿ 1500 ರು. ನೀಡಲಾಗುತ್ತದೆ. ಈ ಮೊತ್ತವನ್ನು ಮುಂದೆ 3000 ರು.ಗೆ ಏರಿಕೆ ಮಾಡಲಾಗುತ್ತದೆ' ಎಂದರು.

ಬಿಹಾರದಲ್ಲಿ ನಿಲ್ಲದ ಕೊಲೆ ಸರಣಿ: ವಕೀಲ, ವೈದ್ಯನ ಹತ್ಯೆ

ಪಟನಾ: ಬಿಹಾರದಲ್ಲಿ ಕೊಲೆಗಳ ಸರಣಿ ಮುಂದುವರಿದಿದ್ದು, ಭಾನುವಾರ ಒಬ್ಬ ಆರೋಗ್ಯಾಧಿಕಾರಿ ಹಾಗೂ ವಕೀಲನನ್ನು ಹತ್ಯೆ ಮಾಡಲಾಗಿದೆ.

ಶನಿವಾರ ರಾತ್ರಿ ಆರೋಗ್ಯಾಧಿಕಾರಿ ಸುರೇಂದ್ರ ಕುಮಾರ್ (50) ಪಿಪ್ರಾದ ಶೇಖಪುರ ಗ್ರಾಮದಲ್ಲಿ ಕರ್ತವ್ಯನಿರತರಾಗಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ವಕೀಲ ಜಿತೇಂದ್ರ ಕುಮಾರ್ (58) ಎಂಬುವವರನ್ನೂ ಹತ್ಯೆ ಮಾಡಲಾಗಿದೆ. 24 ಗಂಟೆ ಅವಧಿಯಲ್ಲಿ ಒಟ್ಟು ನಾಲ್ವರು ಹಂತಕರಿಂದ ಸಾವಿಗೀಡಾದಂತಾಗಿದೆ. ಇದರಿಂದ ಈ ತಿಂಗಳಲ್ಲಿ ಇಂಥ 5 ಹತ್ಯೆ ನಡೆದಂತಾಗಿದೆ.

ಶನಿವಾರ ಬೆಳಿಗ್ಗೆ ಮೆಹಸುಲ್ ಚೌಕದಲ್ಲಿ ಉದ್ಯಮಿ ಪುಟು ಖಾನ್ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಜು.11ರ ಸಂಜೆ ಕಿರಾಣಿ ಅಂಗಡಿ ಮಾಲೀಕ ವಿಕ್ರಮ್ ಝಾ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು. ಜು.10ರಂದು ಹೊಟೆಲ್‌ನಿಂದ ಚಹಾ ಕುಡಿದು ಮರಳುತ್ತಿದ್ದ ವಕೀಲ ಜಿತೇಂದ್ರ ಕುಮಾರ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಜು.14ರಂದು ಬಿಹಾರದ ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ ಸಹ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬನ ಗುಂಡೇಟಿನಿಂದ ಮೃತಪಟ್ಟಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಸಾವಿನ ಪ್ರಕರಣಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಳವಳ ಸೃಷ್ಟಿಸಿವೆ.

ನಸ್ರಲ್ಲಾ ರೀತಿಯೇ ಇರಾನ್‌ ಅಧ್ಯಕ್ಷರ ಹತ್ಯೆಗೆ ಇಸ್ರೇಲ್‌ ಸಂಚು: ಸ್ವಲ್ಪದರಲ್ಲಿ ಪಾರು

ಟೆಹ್ರಾನ್‌: ಕಳೆದ ತಿಂಗಳು ತಾರಕಕ್ಕೇರಿದ್ದ ಇಸ್ರೇಲ್‌-ಇರಾನ್‌ ಕದನದ ವೇಳೆ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹತ್ಯೆಗೆ ಇಸ್ರೇಲ್‌ ಯತ್ನಿಸಿತ್ತು. ದಾಳಿಯಲ್ಲಿ ಮಸೌದ್‌ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ವರದಿಯಾಗಿದೆ.

ಕಳೆದ ವರ್ಷ ಲೆಬನಾನ್‌ನ ಬೈರೂತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾನನ್ನು, ಆತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ವಾಯುದಾಳಿ ನಡೆಸಿ ಸಂಹರಿಸಲಾಗಿತ್ತು. ಅದೇ ಮಾದರಿಯಲ್ಲಿ ಮಸೌದ್‌ರನ್ನೂ ಮುಗಿಸಲು, ಟೆಹ್ರಾನ್‌ನಲ್ಲಿ ನಡೆಯುತ್ತಿದ್ದ ಇರಾನ್‌ನ ರಾಷ್ಟ್ರೀಯ ಭದ್ರತಾ ಸಭೆಯ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ಮಾಡಿತ್ತು. ಇರಾನ್‌ನ ಸ್ಪೀಕರ್‌ ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನೂ ಕೊಲ್ಲುವ ಯೋಜನೆಯಿತ್ತು ಎನ್ನಲಾಗಿದೆ.

ದಾಳಿಯಿಂದ ಮಸೌದ್‌ರ ಕಾಲಿಗೆ ಕೊಂಚ ಗಾಯವಾಗಿದ್ದು, ಕೂಡಲೇ ಮೂವರು ನಾಯಕರು ತುರ್ತುದ್ವಾರದಿಂದ ಹೊರಬಂದು ಬಚಾವಾಗಿದ್ದರು. ಈ ಬಗ್ಗೆ ಮಸೌದ್‌ ಕಳೆದ ವಾರ ಅಮರಿಕನ್ ರಾಜಕೀಯ ವಿಮರ್ಶಕರ ಮುಂದೆಯೂ ಪ್ರಸ್ತಾಪಿಸಿ, 'ಅವರು ಯೋಜನೆಯಂತೆ ದಾಳಿ ಮಾಡಿದ್ದರು. ಆದರೆ ವಿಫಲರಾದರು' ಎಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries