ನವದೆಹಲಿ: ಡಿಎಪಿ ರಸಗೊಬ್ಬರ (DAP fertilizer) ಪೂರೈಕೆಗಾಗಿ ಸೌದಿ ಅರೇಬಿಯಾ ಜೊತೆ ಭಾರತ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಿದೆ. ಸೌದಿ ದೇಶದ ಮೈನಿಂಗ್ ಸಂಸ್ಥೆಯಾದ ಮಾದೆನ್ (Ma'aden) ಜೊತೆ ಭಾರತದ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್, ಕೋಲ್ ಇಂಡಿಯಾ, KRIBHCO ಕಂಪನಿಗಳು ಸಹಿ ಹಾಕಿವೆ.
ಐದು ವರ್ಷ ಕಾಲ ಈ ಸೌದಿ ಕಂಪನಿಯು ಭಾರತೀಯ ಕಂಪನಿಗಳಿಗೆ 31 ಲಕ್ಷ ಮೆಟ್ರಿಕ್ ಟನ್ ಡೈ ಅಮ್ಮೋನಿಯಂ ಫಾಸ್ಫೇಟ್ (DAP- Di-ammonium Phosphate) ರಸಗೊಬ್ಬರವನ್ನು ಪೂರೈಸಲಿದೆ.
ಈ ಒಪ್ಪಂದವನ್ನು ಮತ್ತಷ್ಟು ಐದು ವರ್ಷಗಳಿಗೆ ವಿಸ್ತರಿಸುವ ಅವಕಾಶ ಇದೆ. ಭಾರತದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರು ಸೌದಿ ಅರೇಬಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಕೈಕೊಟ್ಟ ಚೀನಾ… ಕೈಹಿಡಿದ ಸೌದಿ
ಡಿಎಪಿ ರಸಗೊಬ್ಬರಗಳಿಗೆ ಚೀನಾ ಮೊದಲಾದ ದೇಶಗಳ ಮೇಲೆ ಭಾರತ ಅವಲಂಬಿತವಾಗಿದೆ. ಆದರೆ, ಚೀನಾ ಈಗ ರಫ್ತಿಗೆ ನಿರ್ಬಂಧ ಹೇರಿರುವುದರಿಂದ ಭಾರತಕ್ಕೆ ರಸಗೊಬ್ಬರ ಕೊರತೆ ಎದುರಾಗುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಭಾರತವು ಸೌದಿ ಅರೇಬಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಚೀನಾದಿಂದ ಭಾರತಕ್ಕೆ ಸಾಕಷ್ಟು ವರ್ಷಗಳಿಂದ ರಸಗೊಬ್ಬರಗಳ ಪೈರೈಕೆಯಾಗುತ್ತಿತ್ತು. ಕಡಿಮೆ ಬೆಲೆಗೆ ಸುಲಭವಾಗಿ ಲಭ್ಯವಾಗುತ್ತಿತ್ತು. ಚೀನಾ ಕಳೆದ ಎರಡು ತಿಂಗಳಿಂದ ಭಾರತಕ್ಕೆ ವಿಶೇಷ ರಸಗೊಬ್ಬರ ರಫ್ತನ್ನು ನಿಲ್ಲಿಸಿದೆ. ಇದರಿಂದಾಗಿ ಭಾರತೀಯ ಕಂಪನಿಗಳು ಯೂರೋಪ್, ರಷ್ಯಾ ಮತ್ತು ಪಶ್ಚಿಮ ಏಷ್ಯಾ ದೇಶಗಳ ಮೊರೆ ಹೋಗಬೇಕಾಗಿದೆ. ಇದರ ಜೊತೆಗೆ ಶೇ 15ರಿಂದ 20ರಷ್ಟು ಹೆಚ್ಚುವರಿ ಬೆಲೆಯೂ ಇದೆ ಎಂದು ಹೇಳಲಾಗಿದೆ.
ಚೀನಾದ ಪೋರ್ಟ್ಗಳಲ್ಲಿ 1.50 ಲಕ್ಷ ಟನ್ಗಳಷ್ಟು ಸ್ಪೆಷಾಲಿಟಿ ರಸಗೊಬ್ಬರಗಳು ನಿಂತುಬಿಟ್ಟಿವೆ. ಚೀನಾ ಸರ್ಕಾರ ಅಧಿಕೃತವಾಗಿ ರಫ್ತು ನಿಷೇಧ ಹಾಕಿಲ್ಲವಾದರೂ ಅಲ್ಲಿಯ ಅಧಿಕಾರಿಗಳು ಭಾರತಕ್ಕೆ ಹೋಗಬೇಕಾದ ಸರಕುಗಳಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ, ಈ ಸರಕುಗಳು ಪೋರ್ಟ್ನಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ.
ಈ ಕಾರಣಕ್ಕೆ ಬೇರೆ ಬೇರೆ ದೇಶಗಳಿಂದ ಭಾರತೀಯ ಕಂಪನಿಗಳು ಒಂದು ಲಕ್ಷ ಟನ್ ಕಚ್ಛಾ ವಸ್ತುಗಳನ್ನು ಖರೀದಿಸಿ ಅದನ್ನು ರಸಗೊಬ್ಬರವಾಗಿ ತಯಾರಿಸುವ ಕೆಲಸ ಮಾಡುವುದು ಈಗ ಉಳಿದಿರುವ ಒಂದು ಆಯ್ಕೆ.




