ಡಮಾಸ್ಕಸ್: ಸಿರಿಯಾ ಸಂಘರ್ಷದಲ್ಲಿ ಕಳೆದೊಂದು ವಾರದಲ್ಲಿ 718 ಮಂದಿ ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳು ಸಂಸ್ಥೆಯೊಂದು ಹೇಳಿದೆ.
ಇಲ್ಲಿನ ಸ್ವೀಡಾ ಪ್ರಾಂತ್ಯದಲ್ಲಿ ದುರೂಸ್ ಪಂಗಡದವರು ಮತ್ತು ಸುನ್ನಿ ಬದಾವಿ ಬುಡಕಟ್ಟು ಪಂಗಡದ ಮಧ್ಯೆ ಸಂಘರ್ಷ ನಡೆದಿತ್ತು. ಇಲ್ಲಿ ದುರೂಸ್ ಪಂಗಡದವರ ಪ್ರಾಬಲ್ಯ ಹೊಂದಿದ್ದಾರೆ.
ಸಂಘರ್ಷ ಅಂತ್ಯಕ್ಕೆ ಸಿರಿಯಾ ಸೇನೆ ಯತ್ನಿಸಿತು. ದುರೂಸ್ ಪಂಗಡವನ್ನು ಬೆಂಬಲಿಸಿ ಇಸ್ರೇಲ್ ಕೂಡ ಸಿರಿಯಾದ ಮೇಲೆ ದಾಳಿ ನಡೆಸಿತ್ತು. 'ಸಂಘರ್ಷ ಅಂತ್ಯಗೊಂಡಿದೆ' ಎಂದು ಸಿರಿಯಾ ಸರ್ಕಾರ ಈಗಾಗಲೇ ಹೇಳಿದೆ.
'ಸಂಘರ್ಷವನ್ನು ಅಂತ್ಯಗೊಳಿಸುವ ಸಂಬಂಧ ದುರೂಸ್ ನಾಯಕರು, ಸಿರಿಯಾ ಸೇನೆ ಮತ್ತು ಸುನ್ನಿ ಬದಾವಿ ಬುಡಕಟ್ಟು ಪಂಗಡದ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದವನ್ನು ಎಲ್ಲರೂ ಪಾಲಿಸಬೇಕು' ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.




