HEALTH TIPS

ಮೋದಿ 75ಕ್ಕೆ ನಿವೃತ್ತಿ?: ವಿಪಕ್ಷಗಳಿಗೆ ಆಹಾರವಾದ RSS ಮುಖ್ಯಸ್ಥ ಭಾಗವತ್ ಹೇಳಿಕೆ

ನಾಗ್ಪುರ: 'ರಾಜಕೀಯದಲ್ಲಿ 75 ವರ್ಷ ದಾಟಿದವರು ಸ್ವಯಂ ನಿವೃತ್ತರಾಗಬೇಕು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ ಭಾಗವತ್ ಅವರ ಇತ್ತೀಚಿನ ಹೇಳಿಕೆಯು ಇದೇ ಸೆಪ್ಟೆಂಬರ್‌ಗೆ 75 ವಸಂತಗಳನ್ನು ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿಯ ಕುರಿತೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಆರ್‌ಎಸ್‌ಎಸ್‌ ಸಿದ್ಧಾಂತದ ಪ್ರತಿಪಾದಕ ಮೊರೊಪಂತ್ ಪಿಂಗ್ಲೆ ಅವರ ಕುರಿತ ಪುಸಕ್ತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಭಾಗವತ್, '75 ವರ್ಷ ತುಂಬಿದ ತಕ್ಷಣ, ಅಧಿಕಾರದಿಂದ ಕೆಳಕ್ಕಿಳಿಯಬೇಕು. ಇತರರಿಗೆ ಹಾದಿ ಮಾಡಿಕೊಡಬೇಕು' ಎಂದಿದ್ದರು.

'75 ವರ್ಷ ತುಂಬಿದಾಗ ಶಾಲು ಹೊದಿಸಿ ಸನ್ಮಾನಿಸಿದರೆ, ವಯಸ್ಸಾಯಿತು, ನಿವೃತ್ತರಾಗಬೇಕು ಎಂಬುದನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಆ ತಕ್ಷಣವೇ ಅಧಿಕಾರದಿಂದ ಕೆಳಗಿಳಿದು ಇತರರಿಗೆ ದಾರಿ ಮಾಡಿಕೊಡಬೇಕು' ಎಂದು ಮೊರೊಪಂತ್ ಪಿಂಗ್ಲೆ ಹೇಳಿದ್ದನ್ನು ಭಾಗವತ್‌ ಸ್ಮರಿಸಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌, 'ಎಲ್.ಕೆ. ಅಡ್ವಾನಿ, ಮುರಳಿ ಮನೋಹರ ಜೋಶಿ ಹಾಗೂ ಜಸ್ವಂತ್ ಸಿಂಗ್‌ ಅವರಿಗೆ 75 ವರ್ಷ ತುಂಬಿದ ತಕ್ಷಣ ನಿವೃತ್ತರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಒತ್ತಡ ಹೇರಿದ್ದರು. ಈಗ ಅದೇ ನಿಯಮ ತಮಗೂ ಅನ್ವಯಿಸುವಂತೆ ನೋಡಿಕೊಳ್ಳುತ್ತಾರಾ' ಎಂದು ಪ್ರಶ್ನಿಸಿದ್ದಾರೆ.

'ಪ್ರಧಾನಿಯಾಗಿ ಹತ್ತು ವರ್ಷದಲ್ಲಿ ಒಮ್ಮೆಯೂ ಭೇಟಿ ನೀಡದ ಮೋದಿ, ಕಳೆದ ವರ್ಷ ನಾಗ್ಪುರ ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದರು. ಅದು ನಿವೃತ್ತಿಯ ಚರ್ಚೆಗೆ ಇದ್ದಿರಬಹುದು. ಆದರೆ ಅಂಥ ಚರ್ಚೆಯೇ ನಡೆದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಬಿಜೆಪಿ ಸಂವಿಧಾನದಲ್ಲಿ ನಿವೃತ್ತಿಯ ಪ್ರಸ್ತಾಪವೇ ಇಲ್ಲ ಎಂದು 2023ರಲ್ಲಿ ಅಮಿತ್ ಶಾ ಹೇಳಿದ್ದರು. 2029ರವರೆಗೂ ಮೋದಿ ಅವರೇ ಪ್ರಧಾನಿಯಾಗಿರುತ್ತಾರೆ. ನಿವೃತ್ತಿಯ ಚರ್ಚೆ ಊಹಾಪೋಹಗಳೇ ಹೊರತು ನಿಜವಲ್ಲ. ಇಂಥ ಸುಳ್ಳುಗಳಿಂದ ಇಂಡಿಯಾ ಬಣ ಗೆಲುವು ಸಾಧಿಸದು ಎಂದಿದ್ದನ್ನು' ರಾವುತ್ ನೆನಪಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಮುಖಂಡ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯಿಸಿ, 'ಆಚರಣೆಗೆ ತಾರದ ಬೋಧನೆ ಸದಾ ಅಪಾಯಕಾರಿ. ಮಾರ್ಗದರ್ಶಕ ಮಂಡಳವು 75 ತುಂಬಿದವರಿಗೆ ಕಡ್ಡಾಯ ನಿವೃತ್ತಿ ಎಂಬ ನಿಯಮವನ್ನು ತಂದಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ನಿಯಮಕ್ಕೆ ತಿಲಾಂಜಲಿ ನೀಡಿರುವ ಸ್ಪಷ್ಟ ಚಿತ್ರಣವಿದೆ' ಎಂದಿದ್ದಾರೆ.

'ದೇಶಕ್ಕೆ 'ಅಚ್ಚೇ ದಿನ' ಬರಲಿದೆ' ಎಂದು ಕಾಂಗ್ರೆಸ್ ಕಾಲೆಳೆದಿದೆ.

ಆದರೆ ಮತ್ತೊಂದು ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದ ಅಮಿತ್ ಶಾ, 'ನಿವೃತ್ತಿಯ ನಂತರ ವೇದ ಹಾಗೂ ಉಪನಿಷತ್‌ಗಳ ಅಧ್ಯಯನ, ಸಾವಯವ ಕೃಷಿ ನಡೆಸುತ್ತೇನೆ' ಎಂದಿದ್ದರು. ಕಳೆದ ಏಪ್ರಿಲ್‌ಗೆ ಶಾಗೆ 60 ವಸಂತಗಳು ತುಂಬಿತು.

ನರೇಂದ್ರ ಮೋದಿ ಅವರು 1950ರ ಸೆ. 17ರಂದು ಜನಿಸಿದವರು. ಮೋಹನ್ ಭಾಗವತ್ ಅವರೂ ಅದೇ ವರ್ಷ ಸೆ. 11ರಂದು ಜನಿಸಿದ್ದಾರೆ. ಇಬ್ಬರಿಗೂ ಇದೇ ಸೆಪ್ಟೆಂಬರ್‌ನಲ್ಲಿ 75 ವಸಂತಗಳು ಪೂರ್ಣಗೊಳ್ಳುವ ಸಂದರ್ಭದಲ್ಲೇ ಹೊರಬಿದ್ದ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries