ಚೆನ್ನೈ: ಆಪರೇಷನ್ ಸಿಂಧೂರ ಕುರಿತ ವರದಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಶುಕ್ರವಾರ ವಿದೇಶಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನಿ ದಾಳಿಯಿಂದ ಭಾರತದ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದಕ್ಕೆ ಪುರಾವೆ ನೀಡುವಂತೆ ಸವಾಲು ಹಾಕಿದ್ದಾರೆ.
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರದ ಬಗ್ಗೆ ವಿವರಿಸಿದರು. ಭಾರತದ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ವರದಿ ಮಾಡುವಾಗ ವಿದೇಶಿ ಮಾಧ್ಯಮಗಳು ಪಕ್ಷಪಾತದ ಧೋರಣೆ ತಳೆಯುತ್ತವೆ ಎಂದು ಕಿಡಿಕಾರಿದರು.
ಆಪರೇಷನ್ ಸಿಂಧೂರದ ಸಮಯದಲ್ಲಿ ಪಾಕಿಸ್ತಾನ ಇದನ್ನು ಮಾಡಿದೆ. ಅದನ್ನು ಮಾಡಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅದಕ್ಕೆ ಒಂದೇ ಒಂದು ಸಾಕ್ಷಿ ಇಲ್ಲ. ಆದರೆ, ಭಾರತೀಯ ವಾಯುಪಡೆಯು ಪಾಕಿಸ್ತಾನದ ನೆಲೆಗಳ ಮೇಲೆ ಮಾಡಿದ ಹಾನಿಯ ಚಿತ್ರಗಳು ಮಾತ್ರ ಎಲ್ಲೆಡೆ ಹರಿದಾಡಿವೆ ಎಂದು ಹೇಳಿದ್ದಾರೆ.
'ವಿದೇಶಿ ಪತ್ರಿಕೆಗಳು ಪಾಕಿಸ್ತಾನ ಅದನ್ನು ಮಾಡಿದೆ. ಇದನ್ನು ಮಾಡಿದೆ ಎಂದು ವರದಿ ಮಾಡಿವೆ. ಭಾರತದ ಯಾವುದೇ ಒಂದು ಕಟ್ಟಡಕ್ಕೆ ಪಾಕಿಸ್ತಾನ ಹಾನಿ ಮಾಡಿರುವ ಚಿತ್ರವಿದ್ದರೆ ನನಗೆ ತೋರಿಸಿ. ಅವರ ದಾಳಿಯಿಂದ ಕನಿಷ್ಠ ಒಂದು ಗಾಜಿನ ಫಲಕವಾದರೂ ಮುರಿದಿದ್ದರೆ ತೋರಿಸಿ. ಈಗ ಎಲ್ಲೆಡೆ ಹರಿದಾಡುತ್ತಿರುವ ಚಿತ್ರಗಳು ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದಲ್ಲಿ 13 ವಾಯುನೆಲೆಗಳ ಮೇಲೆ ದಾಳಿ ನಡೆಸಿ ಭಾರತದ ವಾಯುಪಡೆ ಮಾಡಿರುವ ಹಾನಿಯದ್ದಾಗಿದೆ' ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ, ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ದಾಳಿಗೆ ಮುಂದಾದಾಗ ಪಾಕಿಸ್ತಾನ ವಾಯುನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು.
ಪಾಕಿಸ್ತಾನದ ಯುದ್ಧ ವಿಮಾನಗಳ ಉಡಾವಣೆ ಸಾಮರ್ಥ್ಯವನ್ನು ನಾಶ ಮಾಡಲು ಭಾರತ 15 ಬ್ರಹ್ಮೋಸ್ ಕ್ಷಿಪಣಿಗಳನ್ನು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಉಡಾಯಿಸಿತ್ತು. ಈ ಕಾರ್ಯಾಚರಣೆಯಲ್ಲಿ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳು ಪ್ರಮುಖ ಪಾತ್ರ ವಹಿಸಿದವು ಎಂದು ಡೊಬಾಲ್ ಒತ್ತಿ ಹೇಳಿದರು. ದೇಶೀಯವಾಗಿ ಮತ್ತಷ್ಟು ತಂತ್ರಜ್ಞಾನ ಅಭಿವೃದ್ಧಿಯ ಅಗತ್ಯವಿದೆ ಎಂದೂ ಹೇಳಿದರು.




