ತಿರುವನಂತಪುರಂ: ಸುಳ್ಳು ಪೋಕ್ಸೊ ಪ್ರಕರಣವೊಂದರಲ್ಲಿ ಕೇರಳದ ಆಲಪ್ಪುಳ ಮೂಲದ 75 ವರ್ಷದ ವ್ಯಕ್ತಿಯೊಬ್ಬರು ಸುಮಾರು 9 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಇಲ್ಲಿನ ಶಾಲೆಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಜೋಸೆಫ್ ಎಂಬುವವರ ಮೇಲೆ, ಅದೇ ಶಾಲೆಯ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಳು.
ಬಾಲಕಿ ನೀಡಿದ ದೂರಿನ ಅನ್ವಯ 2022ರ ನವೆಂಬರ್‌ನಲ್ಲಿ ಜೋಸೆಫ್ ಅವರನ್ನು ಬಂಧಿಸಲಾಗಿತ್ತು.
ಬಳಿಕ ವಿಚಾರಣೆ ವೇಳೆ ಬಾಲಕಿ ನಿಜವಾದ ಅಪರಾಧಿ ಯಾರೆಂದು ಬಹಿರಂಗಪಡಿಸಿದ್ದಳು. ಅಲ್ಲದೇ ಅವನನ್ನು ಕಾಪಾಡಲು ಜೋಸೆಫ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು. 2023ರ ಜುಲೈನಲ್ಲಿ ನ್ಯಾಯಾಲಯವು ಜೋಸೆಫ್ ಅವರಿಗೆ ಜಾಮೀನು ನೀಡಿದೆ.
ಆ ಬಾಲಕಿ ಮತ್ತು ಆಕೆಯ ಕುಟುಂಬಸ್ಥರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಈ ಘಟನೆ ನಿಜಕ್ಕೂ ನನಗೆ ಆಘಾತವನ್ನುಂಟುಮಾಡಿತು. ಈಗಲೂ ನಾನು ಬಾಲಕಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವಳು ನನ್ನ ಮೊಮ್ಮಕ್ಕಳಿಗಿಂತ ಚಿಕ್ಕವಳು ಎಂದು ಜೋಸೆಫ್ ಹೇಳಿದ್ದಾರೆ.
ಈ ಘಟನೆ ನನಗೆ ಮುಂಜುರವನ್ನುಂಟು ಮಾಡಿದ್ದರೂ, ಆ ಬಾಲಕಿಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಇರಾದೆ ಇಲ್ಲ ಎಂದೂ ಅವರು ತಿಳಿಸಿದ್ದಾರೆ.
ಆ ಬಾಲಕಿ ತುಂಬಾ ಅಳುತ್ತಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ತನ್ನ ಹೇಳಿಕೆಯನ್ನು ಸರಿಪಡಿಸಿಕೊಂಡು ಬಳಿಕ ನನ್ನಲ್ಲಿ ಕ್ಷಮೆಯಾಚಿಸಿದಳು. ನಿಜವಾದ ಅಪರಾಧಿಯ ಬಲವಂತದಿಂದ ಅವಳು ಆ ರೀತಿ ಸುಳ್ಳು ಹೇಳಿಕೆ ನೀಡಿರಬಹುದು. ಆದರೆ ನನ್ನ ಕುಟುಂಬ, ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರು ನನ್ನೊಂದಿಗೆ ನಿಂತಿದ್ದಾರೆ ಎಂದು ಜೋಸೆಫ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸುಳ್ಳು ಪೋಕ್ಸೊ ಪ್ರಕರಣ ದಾಖಲಿಸಿದ ಮಹಿಳೆಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್




