ಪಟ್ನಾ: ಬಿಹಾರ ಪತ್ರಕಾರ್ ಸಮ್ಮಾನ್ ಯೋಜನೆಯಡಿ ನಿವೃತ್ತ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ₹ 9 ಸಾವಿರದಷ್ಟು ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಅಲ್ಲಿಗೆ ಶೇ 250ರಷ್ಟು ಏರಿಕೆ ಮಾಡಿದಂತಾಗಿದೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಸತತ ಮೂರನೇ ದಿನವೂ ಸಂಸದರಿಂದ ಪ್ರತಿಭಟನೆ
ಈ ಸರ್ಕಾರಿ ಯೋಜನೆಯಡಿ ಅರ್ಹ ಪತ್ರಕರ್ತರು ಇನ್ನು ಮುಂದೆ ಮಾಸಿಕ ₹ 15 ಸಾವಿರ ಪಡೆಯಲಿದ್ದಾರೆ.
ಈ ಹಿಂದೆ ₹ 6 ಸಾವಿರ ಸಿಗುತ್ತಿತ್ತು. ಈ ವರ್ಷಾಂತ್ಯದಲ್ಲಿ ಬಿಹಾರದಲ್ಲಿ ವಿಧಾಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಈ ಘೋಷಣೆ ಹೊರಬಿದ್ದಿದೆ.
ಶನಿವಾರ ಎಕ್ಸ್ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದ ನಿತೀಶ್ ಕುಮಾರ್., 'ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆಯಡಿಯಲ್ಲಿ, ಎಲ್ಲಾ ಅರ್ಹ ಪತ್ರಕರ್ತರಿಗೆ ಮಾಸಿಕ ₹ 6 ಸಾವಿರ ಬದಲು ₹ 15 ಸಾವಿರ ಪಿಂಚಣಿ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ' ಎಂದು ಹೇಳಿದ್ದಾರೆ.
ಜೊತೆಗೆ ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವವರ ಮೃತ್ಯು ಸಂಭವಿಸಿದರೆ, ಅವರ ಕುಟುಂಬಸ್ಥರಿಗೆ ಮಾಸಿಕ ನೀಡಲಾಗುತ್ತಿದ್ದ ₹ 3 ಸಾವಿರವನ್ನು ₹ 10 ಸಾವಿರಕ್ಕೆ ಏರಿಸಲಾಗಿದೆ ಎಂದೂ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಪತ್ರಕರ್ತರು ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಂವಿಧಾನದ ನಾಲ್ಕನೇ ಸ್ತಂಭವಾಗಿರುವ ಅವರು ಸಾಮಾಜಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿವೃತ್ತಿಯ ಬಳಿಕ ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಮತ್ತು ಘನತೆಯಿಂದ ಬದುಕಲು ಸಾಧ್ಯವಾಗುವಂತೆ ನಾವು ಮೊದಲಿನಿಂದಲೂ ಅವರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ' ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.




