HEALTH TIPS

ನ್ಯಾಯಾಂಗದಲ್ಲೂ ಸವರ್ಣೀಯ - ಶೂದ್ರ ವ್ಯವಸ್ಥೆ: ಮಧ್ಯಪ್ರದೇಶ ಹೈಕೋರ್ಟ್ ಕಳವಳ

ನವದೆಹಲಿ: ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಡುವಿನ ಸಂಬಂಧವು ಊಳಿಗಮಾನ್ಯ ಪದ್ಧತಿಯ ಪ್ರಭು ಮತ್ತು ಸೇವಕರ ರೀತಿಯಲ್ಲಿ ಮೇಲು ಕೀಳು ಸೃಷ್ಟಿಸಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿದ್ದ ವಿಶೇಷ ನ್ಯಾಯಾಧೀಶ (ಪರಿಶಿಷ್ಟ ಜಾತಿ/ ಪಂಗಡ) ಅವರನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅತುಲ್ ಶ್ರೀಧರನ್‌, 'ಸದ್ಯ ಇರುವ ವ್ಯವಸ್ಥೆಯಲ್ಲಿ ಪರಸ್ಪರರ ನಡುವೆ ಗೌರವ ಭಾವ ಇರಬೇಕಾದ ಜಾಗದಲ್ಲಿ ಭಯ, ಅಧೀನತೆ ಮತ್ತು ಮಾನಸಿಕ ಅಧೀನತೆಗಳೇ ಆಳವಾಗಿ ಬೇರೂರಿವೆ' ಎಂದಿದ್ದಾರೆ.

'ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಶುಭಕೋರುವಾಗ ಜಿಲ್ಲಾ ನ್ಯಾಯಾಧೀಶರು ಸಂಪೂರ್ಣ ಊಳಿಗಮಾನ್ಯ ಪದ್ಧತಿಯ ಸೇವಕರಂತೆ ವರ್ತಿಸುತ್ತಾರೆ. ಅವರ ದೇಹ ಭಾಷೆಯೂ ಹಾಗೇ ಇರುತ್ತದೆ. ನ್ಯಾಯಾಧೀಶರ ಹಾವಭಾವವು ಬೆನ್ನುಮೂಳೆಯೇ ಇಲ್ಲದ ಸಸ್ತನಿಗಳ ಪ್ರಬೇಧದಂತೆ ಕಾಣಿಸುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಹೈಕೋರ್ಟ್‌ನ ನ್ಯಾಯಮೂರ್ತಿಗಳು ಬರುತ್ತಿದ್ದಾರೆ ಎಂದರೆ ಜಿಲ್ಲಾ ನ್ಯಾಯಾಧೀಶರು ರೈಲ್ವೆ ನಿಲ್ದಾಣಗಳಲ್ಲಿ ಅವರಿಗಾಗಿ ಉಪಾಹಾರ ಮತ್ತಿತರ ವಸ್ತುಗಳನ್ನು ಹಿಡಿದು ಕಾಯುವುದು ವಸಾಹತುಶಾಹಿ ವ್ಯವಸ್ಥೆ ಇಂದಿಗೂ ಬೇರೂರಿರುವುದನ್ನು ಪ್ರತಿಬಿಂಬಿಸುತ್ತದೆ' ಎಂದಿದ್ದಾರೆ.

'ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಆದಾಗಲೂ ಅವರಿಗೆ ಆಸನವನ್ನು ನೀಡಲಾಗುವುದಿಲ್ಲ. ಒಂದೊಮ್ಮೆ ಆಸನ ನೀಡಿದರೂ ಅವರು ಕೂರಲು ಹಿಂಜರಿಯುತ್ತಾರೆ. ಇದು ವ್ಯವಸ್ಥಿತ ಅಸಮಾನತೆಯ ಸಂಪೂರ್ಣ ಮಾನಸಿಕ ದಾಸ್ಯದಂತೆ ಕಾಣಿಸುತ್ತದೆ. ಹೈಕೋರ್ಟ್ ಎಲ್ಲಿ ಅಸಮಾಧಾನಗೊಳ್ಳುತ್ತದೋ ಎಂಬ ಭಯದಲ್ಲೇ ಜಿಲ್ಲಾ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ' ಎಂದು ನ್ಯಾ. ಶ್ರೀಧರನ್ ಆತಂಕ ವ್ಯಕ್ತಪಡಿಸಿದ್ದಾರೆ.

'ಈ ಭಯವು ನ್ಯಾಯದ ಅಡಿಪಾಯದೊಂದಿಗೆ ರಾಜಿ ಮಾಡಿಕೊಳ್ಳಲು ನೂಕುತ್ತದೆ. ಹೀಗಾಗಿ ಅರ್ಹ ಪ್ರಕರಣಗಳಲ್ಲೂ ಜಾಮೀನು ನಿರಾಕರಿಸುವುದು, ಸಾಕಷ್ಟು ಸಾಕ್ಷಿಗಳಿಲ್ಲದಿದ್ದರೂ ದೋಷಾರೋಪಣೆ ದಾಖಲಿಸುವುದು ಮತ್ತು ಮೇಲಿನ ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಾವನೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡುವುದನ್ನು ಜಿಲ್ಲಾ ನ್ಯಾಯಾಲಯ ತಪ್ಪಿಸುತ್ತದೆ ಎಂಬುದನ್ನೂ ಕೆಲ ಆದೇಶಗಳಲ್ಲಿ ಗಮನಿಸಬಹುದು' ಎಂದಿದ್ದಾರೆ.

'ಇವು ಶ್ರೇಣೀಕೃತ ವ್ಯವಸ್ಥೆಗಷ್ಟೇ ಸೀಮಿತವಾಗದೆ, ಜಾತಿ ವ್ಯವಸ್ಥೆಯನ್ನೂ ರೂಪಕವಾಗಿ ಉಲ್ಲೇಖಿಸಿವೆ. ಒಂದು ಸೂಕ್ಷ್ಮ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ನೆರಳು ರಾಜ್ಯದ ನ್ಯಾಯಾಂಗ ರಚನೆಯಲ್ಲಿ ಕಾಣಬಹುದು. ಇಲ್ಲಿ ಹೈಕೋರ್ಟ್‌ ಸವರ್ಣೀಯರಂತೆ ಹಾಗೂ ಜಿಲ್ಲಾ ನ್ಯಾಯಾಲಯ ಶೂದ್ರರಂತೆ ಗೋಚರಿಸುತ್ತದೆ' ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ನ್ಯಾ. ಅತುಲ್ ಶ್ರೀಧರನ್, ನ್ಯಾಯಮೂರ್ತಿ, ಮಧ್ಯಪ್ರದೇಶ ಹೈಕೋರ್ಟ್'ಯಾವುದೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಸ್ವಾತಂತ್ರ್ಯವು ಸಾಮಾನ್ಯ ಜನರು ತಲುಪಲು ಸಾಧ್ಯವಾಗದ ಹೈಕೋರ್ಟ್‌ಗಿಂತ ನ್ಯಾಯಾಂಗ ವ್ಯವಸ್ಥೆಯ ಮೊದಲ ಹಂತವಾದ ಜಿಲ್ಲಾ ನ್ಯಾಯಾಲಯದ ನಿರ್ಭೀತಿ ವಾತಾವರಣದಲ್ಲಿರುತ್ತದೆ'

ಭಯದ ವಾತಾವರಣದಿಂದ ನ್ಯಾಯಾಧೀಶರಲ್ಲಿ ಖಿನ್ನತೆಯ ಭಾವ

'ವ್ಯವಸ್ಥೆಯಲ್ಲಿನ ಈ ಭಯದ ಪರಿಣಾಮವು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ಮನಸ್ಸಿನಲ್ಲಿ ಖಿನ್ನತೆಯ ಭಾವ ಹೆಚ್ಚಿಸುತ್ತಿದೆ. ಇದು ಅಂತಿಮವಾಗಿ ನ್ಯಾಯಾಂಗದ ಕಾರ್ಯವಿಧಾನ ಮತ್ತು ಕಾನೂನಿನ ನಿಯಮಗಳಿಗೇ ಬೆದರಿಕೆಯೊಡ್ಡುತ್ತಿದೆ' ಎಂದು ಹೇಳಿದ್ದಾರೆ.

'ಅಪಾಯಕಾರಿಯಲ್ಲದ ಬಹಳಷ್ಟು ತಪ್ಪುಗಳನ್ನು ನಿಂದಿಸಲು ಸದಾ ಸಿದ್ಧವಿರುವ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳನ್ನು ಸದಾ ಭಯದಲ್ಲೇ ಇರಿಸುತ್ತದೆ. ಹೀಗಾಗಿ ಶಿಕ್ಷೆಯ ಭಯದಲ್ಲೇ ಅವರು ಕಾರ್ಯ ನಿರ್ವಹಿಸುವಂತಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೂ ಕುಟುಂಬವಿದೆ. ಮಕ್ಕಳಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಪಾಲಕರು ಇರುತ್ತಾರೆ, ಆರ್ಥಿಕ ಜವಾಬ್ದಾರಿಗಳಿರುತ್ತವೆ. ಒಂದು ಆದೇಶಕ್ಕಾಗಿ ಅವರನ್ನು ಹಠಾತ್ತಾಗಿ ವಜಾಗೊಳಿಸಿದರೆ ಅವರು ಮತ್ತು ಅವರ ಕುಟುಂಬವನ್ನು ಬೀದಿಗೆ ನೂಕಿದಂತಾಗಲಿದೆ. ಅಷ್ಟು ಮಾತ್ರವಲ್ಲ, ಅವರ ಪ್ರಾಮಾಣಿಕತೆಯನ್ನೇ ಸಮಾಜ ಪ್ರಶ್ನಿಸುವಂತೆ ಮಾಡಿದಂತಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಇಂಥ ಭಯದಲ್ಲೇ ಸದಾ ಕಾರ್ಯನಿರ್ವಹಿಸುವ ನ್ಯಾಯಾಂಗದಿಂದ ನ್ಯಾಯವನ್ನು ನಿರ್ವಹಿಸುವದನ್ನು ಬಿಟ್ಟರೆ, ನ್ಯಾಯದಾನ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಧಿಕಾರ ಸಮತೋಲನವನ್ನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ನ್ಯಾ. ಶ್ರೀಧರನ್ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ...

ವ್ಯಾಪಂ ಪ್ರಕರಣದಲ್ಲಿ ಕೆಲ ಜಾಮೀನುಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, 2015ರ ಅ. 19ರಂದು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. 28 ವರ್ಷಗಳ ವೃತ್ತಿ ಜೀವನದಲ್ಲಿ ಕಳಂಕವಿಲ್ಲದ ದಾಖಲೆ ಇದ್ದರೂ ಕೆಲ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಅವರ ನ್ಯಾಯಾಂಗ ವಿವೇಚನೆಯೊಂದಿಗೆ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳಿಂದ ವಜಾಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಗೇ ಧಕ್ಕೆಯನ್ನುಂಟು ಮಾಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಅಪ್ರಾಮಾಣಿಕತೆ ಅಥವಾ ಭ್ರಷ್ಟಾಚಾರದ ಪುರಾವೆ ಇಲ್ಲದಿದ್ದರೆ ನ್ಯಾಯಾಂಗ ಆದೇಶಗಳು ಶಿಸ್ತು ಕ್ರಮಕ್ಕೆ ಆಧಾರವಾಗುವುದಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧೀಶರ ವಿರುದ್ಧದ ವಜಾ ಆದೇಶವನ್ನು ಪೀಠ ವಜಾಗೊಳಿಸಿತು. ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಪ್ರಯೋಜನಗಳು, ಬಡ್ಡಿಯೊಂದಿಗೆ ಬಾಕಿ ವೇತನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಪೀಠ ಆದೇಶಿಸಿತು. ಅವರ ವಿರುದ್ಧದ ಕಾನೂನುಬಾಹಿರ ಕ್ರಮ, ಅವಮಾನ ಮತ್ತು ಆಘಾತಕ್ಕಾಗಿ ₹5 ಲಕ್ಷ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries