ದ್ರಾಸ್: ಅಪರೇಷನ್ ಸಿಂಧೂರ ವೇಳೆ ನಡೆಸಿದ ಸರ್ಜಿಕಲ್ ದಾಳಿಯು ಭಯೋತ್ಪಾದನೆಯನ್ನು ಬೆಂಬಲಿಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಸಂದೇಶ ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
'ಆಪರೇಷನ್ ಸಿಂಧೂರ ಪಾಕಿಸ್ತಾನಕ್ಕೆ ಒಂದು ಸಂದೇಶವಾಗಿತ್ತು. ಇಡೀ ರಾಷ್ಟ್ರಕ್ಕೆ ತೀವ್ರ ನೋವುಂಟು ಮಾಡಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು. ಈ ಬಾರಿ ಭಾರತ ಶೋಕ ವ್ಯಕ್ತಪಡಿಸಿದ್ದಲ್ಲದೆ, ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ ಎಂದು ತೋರಿಸಿದೆ' ಎಂದು ಜನರಲ್ ದ್ವಿವೇದಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹೇಳಿದ್ದಾರೆ.
ವಿಜಯ ದಿವಸ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶತ್ರುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಭಾರತದ ಹೊಸ ಶೈಲಿ ಎಂದು ಹೇಳಿದ್ದಾರೆ.
'ದೇಶವಾಸಿಗಳು ತೋರಿಸಿದ ನಂಬಿಕೆ ಮತ್ತು ಸರ್ಕಾರ ನೀಡಿದ ಮುಕ್ತ ಹಸ್ತದಿಂದ, ಭಾರತೀಯ ಸೇನೆಯು ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಿತು. ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸಲು ಅಥವಾ ಜನರಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾವುದೇ ಶಕ್ತಿಗೆ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ಇದು ಭಾರತದ ಹೊಸ ಶೈಲಿ' ಎಂದು ಅವರು ಹೇಳಿದ್ದಾರೆ.
'ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಗುರಿಯಾಗಿಸುವ ಮೂಲಕ ಭಾರತ ನಿರ್ಣಾಯಕ ಗೆಲುವು ಸಾಧಿಸಿತು. ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರ್ಣಾಯಕ ವಿಜಯ ಸಾಧಿಸಲು ಸೇನೆಯು ಪಾಕಿಸ್ತಾನದ ಇತರ ಆಕ್ರಮಣಕಾರಿ ನಡೆಗಳನ್ನು ವಿಫಲಗೊಳಿಸಿತು' ಎಂದು ಅವರು ನುಡಿದಿದ್ದಾರೆ.

