ಕಾಸರಗೋಡು: ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಏರಿಕೆ ಕೇರಳದ ಪಿಣರಾಯಿ ವಿಜಯನ್ ಸರ್ಕಾರದ ಕೊಡುಗೆಯಾಗಿರುವುದಾಗಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ. ಅವರು ನಿತ್ಯೋಪಯೋಗಿ ಸಾಮಗ್ರಿ ಬೆಲೆಯೇರಿಕೆ ಖಂಡಿಸಿ ಬಿಜೆಪಿ ವತಿಯಿಂದ ಕಾಸರಗೋಡು ತಾಲೂಕು ಕಚೇರಿ ಎದುರು ಗಂಜಿ ಬೇಯಿಸುವ ಮೂಲಕ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಕೇರಳದ ಇಂದಿನ ದು:ಸ್ಥಿತಿಗೆ ಕೇರಳವನ್ನಾಳುವ ಎಡರಂಗ ಸರ್ಕಾರ ಪೂರ್ಣ ಹೊಣೆಗಾರನಾಗಿದ್ದು, ಇದರಿಂದ ನುಣುಚಿಕೊಳ್ಳಲು ಬಿಜೆಪಿ ಎಂದಿಗೂ ಅವಕಾಶ ನೀಡದು. 2016ರಲ್ಲಿ ಅಧಿಕಾರಕ್ಕೆ ಬರುವಾಗ ಕೇರಳದಲ್ಲಿನ್ನು ಬೆಲೆಏರಿಕೆ ಉಂಟಾಗದೆಂದು ತಿಳಿಸಿದ್ದ ಪಿಣರಾಯಿ ವಿಜಯನ್ ಸರ್ಕಾರದ ಆಡಳಿತದಲ್ಲಿ ನಿತ್ಯೋಪಯೋಗಿ ಸಾಮಗ್ರಿ ದರ ಇಂದು ಗಗನಕ್ಕೇರಿದೆ. ಕೇರಳದ ಸಾಲವೇ 480ಕೋಟಿ ರೂ. ದಾಟಿದೆ. ಆರೋಗ್ಯ, ಶೈಕ್ಷಣಿಕ ವಲಯ ಸಂಪೂರ್ಣ ಪರಾಭವಗೊಂಡಿದೆ.
ಇದೇ ಸಂದರ್ಭ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಯ ಬವಣೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಮಹಿಳಾ ಸ್ವಾವಲಂಬನೆಯಿಂದ ಸ್ತ್ರೀಶಕ್ತಿಯ ಅನಾವರಣಕ್ಕೆ ಹೆಚ್ಚಿನ ಕೊಡುಗೆ ನೀಡಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್ ಸುನಿಲ್, ಸವಿತಾ ಟೀಚರ್, ವೀಣಾ ಅರುಣ್ ಶೆಟ್ಟಿ, ರಮಣಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ನಾಯಕರು, ಕಾರ್ಯಕರ್ತರು ಪಾಲ್ಗೊಂಡರು.





