ಕಾಸರಗೋಡು: ರೈಲ್ವೆ ನಿಲ್ದಾಣಗಳಲ್ಲಿ ನಾಮಫಲಕ, ಸೂಚನಾ ಫಲಕಗಳನ್ನು ಕೊನೆಗೂ ಕನ್ನಡದಲ್ಲಿ ಅಳವಡಿಸುವ ಬಗ್ಗೆ ಚೆನ್ನೈಯಲ್ಲಿರುವ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಣ ವಲಯ ಕಚೇರಿ ಸಹಾಯಕ ಆಯುಕ್ತರಿಂದ ರೈಲ್ವೆ ಪಾಲಕ್ಕಾಡ್ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ.
ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿದ್ದರೂ, ಇಲ್ಲಿ ಕನ್ನಡ ಭಾಷೆಯನ್ನು ಅವಗಣಿಸುತ್ತಿರುವ ಬಗ್ಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಿಣ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಮನವಿ ಪರಿಗಣಿಸಿದ ಆಯುಕ್ತರ ಕಚೇರಿ ಈ ಬಗ್ಗೆ ರೈಲ್ವೆ ಪಾಲಕ್ಕಾಡ್ ವಿಭಾಗಕ್ಕೆ ಪತ್ರಬರೆದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ನಾಮಫಲಕ ಹಾಗೂ ಸೂಚನಾ ಫಲಕಗಳನ್ನು ಇತರ ಭಾಷೆ ಜತೆಗೆ ಕನ್ನಡವನ್ನೂ ಅಳವಡಿಸಬೇಕು. ಈ ಬಗ್ಗೆ ಕೈಗೊಂಡಿರುವ ಕ್ರಮವನ್ನು ಆಯುಕ್ತರ ಕಚೇರಿಗೆ ಶೀಘ್ರ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಪಾಲಕ್ಕಾಡ್ ವಿಭಾಗೀಯ ಪ್ರಬಂಧಕರಿಗೆ ಕಳುಹಿಸಿರುವ ಆದೇಶದ ಪ್ರತಿಯನ್ನು ಬೆಂಗಳೂರಿನ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಹಾಗೂ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೂ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಿಣ ವಲಯ ಕಚೇರಿ ಸಹಾಯಕ ಆಯುಕ್ತರ ಕಚೇರಿಯಿಂದ ಕಳುಹಿಸಿಕೊಡಲಾಗಿದೆ.
ಇದೇ ರೀತಿ ಚೆರ್ಕಳದಿಂದ ತಲಪ್ಪಾಡಿ ವರೆಗಿನ ಷಟ್ಪಥ ಕಾಮಗಾರಿ ಪೂರ್ತಿಗೊಂಡಿರುವ ಪ್ರದೇಶದಲ್ಲಿ ಅಳವಡಿಸಲಾಗಿರುವ ಸೈನ್ ಬೋರ್ಡ್‍ಗಳಲ್ಲಿ ಕನ್ನಡವನ್ನು ಕೈಬಿಟ್ಟಿರುವ ಬಗ್ಗೆ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಿಣ ವಲಯ ಕಚೇರಿ ಸಹಾಯಕ ಆಯುಕ್ತರ ಕಚೇರಿ ಈಗಾಗಲೇ ಪತ್ರ ಬರೆದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿರುವನಂತಪುರ ಸೆಕ್ರೆಟೇರಿಯೆಟ್‍ನಲ್ಲಿ ಕಾರ್ಯಾಚರಿಸುತ್ತಿರುವ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯದರ್ಶಿ ಹಾಗೂ ನೋಡೆಲ್ ಅಧಿಕಾರಿಗಳಿಗೆ ಆದೇಶಿಸಿದೆ.
ಕರ್ನಾಟಕದಿಂದ ಗಡಿನಾಡು ಕಾಸರಗೋಡಿನ ಅಚ್ಚಕನ್ನಡದ ಪ್ರದೇಶ ಮಂಜೇಶ್ವರದಿಂದ ಮುಂದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ನೂತನ ಸೂಚನಾಫಲಕಗಳಲ್ಲಿ ಕನ್ನಡವನ್ನು ಕೈಬಿಡಲಾಗಿತ್ತು. ತಲಪ್ಪಾಡಿಯಿಂದ ಕಾಸರಗೋಡು ವರೆಗಿನ ಷಟ್ಪಥ ರಸ್ತೆಯಲ್ಲಿ ನೂತನವಾಗಿ ಅಳವಡಿಸುತ್ತಿರುವ ಸೂಚನಾಫಲಕಗಳಿಂದ ಕನ್ನಡಕ್ಕೆ ಖೊಕ್ ಕೊಟ್ಟಿರುವುದಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತನ್ನ ವಿರೋಧ ಸೂಚಿಸಿತ್ತು. ಅಲ್ಲದೆ, ಸೂಚನಫಲಕಗಳಲ್ಲಿ ಕನ್ನಡ ಅಳವಡಿಸುವ ಮೂಲಕ ಗಡಿನಾಡ ಕನ್ನಡಿಗರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಪ್ರಾಧಿಕಾರ ಕೇಂದ್ರ ಭಾಷಾ ಅಲ್ಪಸಂಖ್ಯಾತ ಸಚಿವಾಲಯದ ದಕ್ಷಣ ವಲಯ ಕಚೇರಿ ಸಹಾಯಕ ಆಯುಕ್ತರಿಗೂ ಕಳುಹಿಸಿಕೊಟ್ಟಿತ್ತು.






