HEALTH TIPS

ಕೋವಿಡ್ ಲಸಿಕೆ, ಹೃದಯ ಸಂಬಂಧಿತ ಸಾವುಗಳ ನಡುವೆ ಯಾವುದೇ ಸಂಬಂಧವಿಲ್ಲ: ಕೇಂದ್ರ

ನವದೆಹಲಿ: ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ವ್ಯಾಪಕ ಅಧ್ಯಯನಗಳಲ್ಲಿ ಕೋವಿಡ್ ಲಸಿಕೆಗಳು ಮತ್ತು ಹೃದಯಾಘಾತದಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದಾಗಿ ನಿರ್ಣಾಯಕ ವರದಿ ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

ಹಾಸನದಲ್ಲಿ ಹಲವು ಮಂದಿ ಹಠಾತ್ ಹೃದಯಾಘಾತದಿಂದ ಮೃತಪಡುತ್ತಿರುವ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುರಾತುರಿಯಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು, ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೋವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ ಎಂದು ಟೀಕಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರದ ಆರೋಗ್ಯ ಸಚಿವಾಲಯ ಈ ಹೇಳಿಕೆ ಬಿಡುಗಡೆ ಮಾಡಿದೆ.

ಎದೆ ನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ, ಪ್ರತಿಯೊಬ್ಬರೂ ತಕ್ಷಣ ತಪಾಸಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.

ವಿವರಿಸಲಾಗದ ಹಠಾತ್ ಸಾವುಗಳ ವಿಷಯವನ್ನು ದೇಶದ ಹಲವಾರು ಏಜೆನ್ಸಿಗಳ ಮೂಲಕ ತನಿಖೆ ಮಾಡಲಾಗಿದೆ. ಈ ಅಧ್ಯಯನಗಳಲ್ಲಿ ಕೋವಿಡ್-19 ಲಸಿಕೆ ಮತ್ತು ಹಠಾತ್ ಹೃದಯಾಘಾತದ ಸಾವುಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ವರದಿಗಳು ಹೇಳಿರುವುದಾಗಿಸಚಿವಾಲಯ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಅಧ್ಯಯನಗಳು ಭಾರತದಲ್ಲಿ ಕೋವಿಡ್ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸುತ್ತವೆ. ಅಲ್ಲದೆ, ಗಂಭೀರ ಅಡ್ಡಪರಿಣಾಮಗಳ ಅಪರೂಪದ ಪ್ರಕರಣಗಳಿವೆ ಎಂದು ಅದು ಹೇಳಿವೆ ಎಂದು ಸಚಿವಾಲಯ ತಿಳಿಸಿದೆ.

ಹಠಾತ್ ಹೃದಯಾಘಾತದ ಸಾವುಗಳು ಅನುವಂಶೀಯತೆ, ಜೀವನಶೈಲಿ ಮತ್ತು ಕೋವಿಡ್ ನಂತರದ ತೊಡಕುಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಂಶಗಳಿಂದ ಉಂಟಾಗಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿಶೇಷವಾಗಿ 18 ರಿಂದ 45 ವರ್ಷ ವಯಸ್ಸಿನವರು ಹಠಾತ್ ಹೃದಯಾಘಾತಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಕುರಿತ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ಐಸಿಎಂಆರ್ ಮತ್ತು ಎನ್‌ಸಿಡಿಸಿ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries