ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯ ವಠಾರದಲ್ಲಿರುವ ಹಳೇ ಕಟ್ಟಡದಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕ್ಷಯರೋಗ ಕೇಂದ್ರವನ್ನು ಜುಲೈ 14 ರಂದು ಕಾಸರಗೋಡಿನ ವಿದ್ಯಾನಗರದ ಮಧೂರು ರಸ್ತೆಯಲ್ಲಿರುವ ಐಪಿಎಚ್ ಲ್ಯಾಬ್ ಕಟ್ಟಡಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಈ ಮೂಲಕ ಶಿಥಿಲ ಕಟ್ಟಡದಿಂದ ಕೊನೆಗೂ ಟಿಬಿ ಕೇಂದ್ರಕ್ಕೆ ಮುಕ್ತಿ ಲಭಿಸಿದೆ. ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಹಾಗೂ ಇಲಾಖೆ ಅಧಿಕಾರಿಗಳು ಉಪಯೋಗ ಶೂನ್ಯವೆಂದು ಘೋಷಿಸಿದ್ದ ಅದೇ ಕಟ್ಟಡದಲ್ಲಿ ಟಿಬಿ ಕೇಂದ್ರವನ್ನು ಮುನ್ನಡೆಸಲಾಗುತ್ತಿತ್ತು. ಈ ಬಗ್ಗೆ 'ವಿಜಯವಾಣಿ'ಜುಲೈ 8ರಂದು ವಿಶೇಷ ಲೇಖನ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಮೇಲ್ಚಾವಣಿಗೆ ಸೋರಿಕೆ ತಡೆಗಟ್ಟಲು ಅಳವಡಿಸಿದ ಪ್ಲಾಸ್ಟಿಕ್, ಇನ್ನೊಂದೆಡೆ ಶಿಥಿಲಗೊಂಡಿರುವ ಗೋಡೆ, ಶುಚಿತ್ವ ಪಾಲಿಸದ ವಠಾರದಲ್ಲಿ ಕೇಂದ್ರ ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರೂ ತಮ್ಮ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಜನರಲ್ ಆಸ್ಪತ್ರೆ ವಠಾರದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಟಿಬಿ ಕೇಂದ್ರದ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಕಾಮಗಾರಿಪೂರ್ಣಗೊಳ್ಳಲಿದೆ. ನಂತರ ಹೊಸ ಕಟ್ಟಡಕ್ಕೆ ಟಿಬಿ ಕೇಂದ್ರವನ್ನು ಸ್ಥಳಾಂತರಗೊಳಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ರಾಮದಾಸ್ ಎ.ವಿ. ತಿಳಿಸಿದ್ದಾರೆ.




